ಆಳಂದ: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ ಮಂಡಿಸಿದ ಬಜೆಟ್ ಸಂಪೂರ್ಣವಾಗಿ ಜನವಿರೋಧಿಯಾಗಿದೆ ಎಂದು ಸಿಪಿಐ ಕಾರ್ಯಕರ್ತರು ಪಟ್ಟಣದ ತಾಲೂಕು ಆಡಳಿತಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಈ ಕುರಿತು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯಾದ ನಿರುದ್ಯೋಗ, ಬಡತನ ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಅಗಿದೆ ಎಂದು ಆಕ್ರೋಶ ಹೊರಹಾಕಿದರು.
ಕಿಸಾನಸಭಾ ರಾಜ್ಯ ಕಾಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಕಾರ್ಪೋರೆಟ್ ಬಂಡವಾಳ ಶಾಹಿಗಳ ಹಿತವನ್ನೇ ಆದ್ಯತೆಯನ್ನಾಗಿಸಿ ಕೊಂಡಿರುವ ಮೋದಿ ಸರ್ಕಾರ ಶಿಕ್ಷಣ ಆರೋಗ್ಯ ಕೃಷಿ ಸಾರಿಗೆ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಿಸಲು ಮುಂದಾಗಿದ್ದು, ಈ ಕ್ಷೇತ್ರಗಳ ಅನುದಾನವನ್ನು ಕಡಿತಗೊಳಿಸಿದೆ. ಐಸಿಎಂಆರ್ ಲ್ಯಾಬ್ ಹಾಗೂ ನರ್ಸಿಂಗ್ ಕಾಲೇಜುಗಳನ್ನು ಖಾಸಗಿ ವಲಯಕ್ಕೆ ವಹಿಸಲು ನಿರ್ಧರಿಸಿದೆ ಎಂದು ವಿರೋಧಿಸಿದರು.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷೆ, ಉದ್ಯೋಗ ವೇತನಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದೇ ನಿರ್ಲಕ್ಷಿಸಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ ಸೇರಿದಂತೆ ಜನ ಸಾಮಾನ್ಯರ ದಿನ ಬಳಕೆ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು ಬಜೆಟ್‍ನಲ್ಲಿ ಯಾವ ಪ್ರಸ್ತಾವವನ್ನೂ ಮಾಡದೆ ಸರ್ಕಾರ ಚಿನ್ನಾಭರಣಗಳ ಬೆಲೆಯೂ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಕಾರಣವಾಗುವಂತಹ ಬಜೆಟ್ ಮಂಡಿಸಿದೆ ಎಂದು ಟೀಕಿಸಿದರು.
ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತ, ಕಾರ್ಮಿಕ ಬಡವರ ಯೋಜನೆಗಳು ಗಾಳಿಗೆ ತೂರಿದೆ. ಸರ್ಕಾರಿ ಕ್ಷೇತ್ರದ ಉದಿಮೆಗಳನ್ನ ತನ್ನ ಉದ್ಯಮಿ ಸ್ನೇಹಿತರಿಗೆ ಕವಡೆ ಕಾಸಿನಲ್ಲಿ ಮಾರಾಟ ಮಾಡುತ್ತಲೆ ಬ್ಯಾಂಕ್, ವಿಮೆ, ಟೆಲಿಪೋನ್ ನಂತಹ ಸಾರ್ವಜನಿಕ ಕ್ಷೇತ್ರಗಳಲ್ಲಿನ ಸಾವಿರಾರು ಕೋಟಿ ರೂಪಾಯಿ ಹೂಡಿಕೆಯನ್ನು ಅದಾನಿ, ಅಂಬಾನಿಯಂತಹ ಕಾರ್ಪೋರೆಟ್ ತಿಮಿಂಗಲಗಳಿಗೆ ಧಾರೆ ಎರೆಯುತ್ತಿದೆ ಎಂದು ಆರೋಪಿಸಿದರು.
ಎಸ್‍ಬಿಐ ಸೇರಿದಂತೆ ಬ್ಯಾಂಕಗಳು ಅದಾನಿಗೆ ಭಾರಿ ಮೊತ್ತದ ಸಾಲ ನೀಡಿವೆ. ಇದರಿಂದ ದೇಶದ ಹಣಕಾಸು ವಲಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಇಡೀ ದೇಶದ ವಿರೋಧ ಪಕ್ಷಗಳು ಆಗ್ರಹಿಸಿವೆ. ಕಪ್ಪು ಹಣ ಅಕ್ರಮ ಹಣಕಾಸು ವ್ಯವಹಾರಗಳ ನೋಡಿದರೆ ಮೋದಿ ಅಕ್ರಮಗಳ ಪರವಾಗಿ ನಿಂತಿರುವುದು ಸ್ಪಷ್ಟವಾಗಿದೆ ಅದಾನಿ ಸಮೂಹ ಸಂಸ್ಥೆಗಳ ಮೇಲೆ ಮಾಡಲಾಗಿರುವ ಆರೋಪಕ್ಕೆ ಸುಪ್ರೀಂ ಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಮುಖಂಡರು ಆಗ್ರಹಿಸಿ ಮನವಿ ಸಲ್ಲಿಸಿದರು.
ತಡೋಳಾ ಗ್ರಾಪಂ ಅಧ್ಯಕ್ಷ, ಸಿಪಿಐ ತಾಲೂಕು ಕಾರ್ಯದರ್ಶಿ ಮೈಲಾರಿ ಜೋಗೆ ಮತ್ತು ರಾಜಶೇಖರ ಬಸ್ಮೆ, ಖಲಿಲ ಉಸ್ತಾದ, ಫಕ್ರೋದ್ದೀನ್ ಗೋಳಾ, ಸೈಬಣ್ಣಾ ಪೂಜಾರಿ, ವಿಶ್ವನಾಥ ಜಮಾದಾರ, ದಲಿತ ಮುಖಂಡ ದಯಾನಂದ ಶೇರಿಕಾರ ಮತ್ತಿತರು ಭಾಗವಹಿಸಿದ್ದರು.