ಕಲಬುರಗಿ: ಮನುಷ್ಯನನ್ನು ವಿಶ್ವ ಮಾನವನನ್ನಾಗಿ ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ಶಿಷ್ಟ ಸಾಹಿತ್ಯ ಮೌಲ್ಯಗಳನ್ನು ಪ್ರತಿಪಾದನೆ ಮಾಡುತ್ತದೆ ಎಂದು ಡಾ. ರಾಜಶೇಖರ ಬಿರಾದಾರ ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕಿನ ಜಿಡಗಾದಲ್ಲಿ ಮಾ. 9ರಿಂದ ಆರಂಭವಾಗಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಕುರಿತ ಮೊದಲಗೋಷ್ಠಿಯಲ್ಲಿ ಶಿಷ್ಟ ಸಾಹಿತ್ಯ ಕುರಿತು ಮಾತನಾಡಿದ ಅವರು, ಕಾವ್ಯ, ಪ್ರಬಂಧ, ನಾಟಕ, ಕಾದಂಬರಿ ಸೇರಿದಂತೆ ಹಲವು ಪ್ರಕಾರಗಳನ್ನು ಶಿಷ್ಟ ಸಾಹಿತ್ಯದಲ್ಲಿ ಸೇರಿಸಬಹುದು. ಸಾಹಿತ್ಯ ಸೃಷ್ಟಿ ಅನಿಕೇತನ, ಸ್ವಾವಲಂಬಿ, ನಂಬಿಕೆ, ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂದು ನವ್ಯ ಸಾಹಿತ್ಯ ಪ್ರತಿಪಾದನೆ ಮಾಡಿದೆ ಎಂದು ಹೇಳಿದರು.
ಜನಪದ ಸಾಹಿತ್ಯ ಕುರಿತು ಮಾತನಾಡಿದ ಡಾ. ಸುಜಾತಾ ಪಾಟೀಲ ಅವರು, ಜನಪದರು ಆಡುವ ಮಾತುಗಳು, ಗಾದೆಗಳು, ಒಡಪುಗಳು ಬದುಕಾದವು. ಅವುಗಳೇ ಜನಪದ ಸಾಹಿತ್ಯವೆನಿಸಿಕೊಂಡಿತು ತಿಳಿಸಿದರು. ಜನಪದ ಸಾಹಿತ್ಯದಲ್ಲಿ ಅಪಾರ ಅನುಭವ, ತತ್ವ, ಸಿದ್ದಾಂತಗಳಿವೆ ಎಂದು ಅವರು ತಿಳಿಸಿದರು.
ಪೌರಾಣಿಕ ಸಾಹಿತ್ಯ ಕುರಿತು ಮಾತನಾಡಿದ ಡಾ. ಶಿವರಾಜ ಶಾಸ್ತ್ರೀ, ಪುರಾಣಗಳನ್ನು ಕೇಳುವ, ಆಸ್ವಾದಿಸುವ ಪ್ರಕ್ರಿಯೆ ಎಲ್ಲಿ ಜೀವಂತವಾಗಿರುತ್ತದೋ ಅಲ್ಲಿಯವರೆಗೆ ಪುರಾಣಗಳು ಜೀವಂತವಾಗಿರುತ್ತವೆ ಎಂದರು.
ಪುರಾಣ ಸಾಹಿತ್ಯದಿಂದ ಅಧ್ಯಾತ್ಮ ಭಕ್ತಿ, ಸಂಸ್ಕೃತಿ ಉಳಿಯಲು ಸಾಧ್ಯ. ಪುರಾಣ ನಾಯಕರು ಸಂಸ್ಕೃತಿ ವಿಸ್ತರಿಸುವ, ನೋವು, ದುಃಖ ಪರಿಹರಿಸುವ ಕಾರ್ಯದ ಜೊತೆಗೆ ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತಲೇ ಬಂದಿದ್ದಾರೆ ಎಂದು ತಿಳಿಸಿದರು.
ಖಜೂರಿಯ ಮುರುಘೇಂದ್ರ ಕೋರಣೇಶ್ವರ ಶಿವಯೋಗಿ ಸಾನ್ನಿಧ್ಯ ವಹಿಸಿದ್ದರು. ಡಾ.ರೋಲೆಕಾರ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮಾಲಾ ಕಣ್ಣಿ ನಿರೂಪಿಸಿದರು. ಶರಣಬಸಪ್ಪ ಕೋಬಾಳ ಸ್ವಾಗತಿಸಿದರು. ಶಾಮಸುಂದರ ಕುಲಕರ್ಣಿ ವಂದಿಸಿದರು.
ಮುಡಬಿ ಗುಂಡೇರಾವ, ನಾಗಪ್ಪ ಬೆಳಮಗಿ, ಮಲ್ಲಿನಾಥ ಅಲೆಗಾಂವ ವೇದಿಕೆಯಲ್ಲಿದ್ದರು.