ಕಲಬುರಗಿ: ಕವಿತೆ ಕಟ್ಟುವುದು ಎನ್ನುವುದಕ್ಕಿಂತ ಕವಿತೆ ಹುಟ್ಟುವುದು ಎಂದರೆ ಅರ್ಥ. ದೇವರು ಸಹ ಕಾವ್ಯ ಇಷ್ಟಪಡುತ್ತಾನೆ. ಕಾವ್ಯಯಾತ್ರೆ ನಿರಂತರವಾಗಿದೆ. ಎಲ್ಲ ಸಂದರ್ಭ ಹಾಗೂ ಎಲ್ಲ ಕಾವ್ಯಗಳ ಮುಖ್ಯ ಆಶಯವೇ ನಿರ್ಲಕ್ಷತನವನ್ನು ಎತ್ತಿ ಹೇಳುವುದಾಗಿದೆ ಎಂದು ಡಾ.ಬಸವ ಪಾಟೀಲ ಜಾವಳಿ ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕಿನ ಜಿಡಗಾದಲ್ಲಿ ಗುರುವಾರದಿಂದ ಆರಂಭವಾಗಿರುವ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಹಿರಿಯರ ಕವಿಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಅವರು, ಓದದೆ ಬರೆಯುವ ದುಸ್ಸಾಹಸಕ್ಕೆ ಕೈ ಹಾಕುತ್ತಿರುವ ಕವಿಗಳು, ಅನಿಸಿದ್ದನ್ನು ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಪದ್ಯ ಪದವಿಲ್ಲದಿರಬೇಕು, ಹೆಜ್ಜೆ ಗುರುತು ಇಲ್ಲದೆ ಪಕ್ಷಿ ಹಾರುವಂತೆ ಸ್ತಬ್ಧವಾಗಿರಬೇಕು ಎಂದು ಬರಗೂರು ರಾಮಚಂದ್ರಪ್ಪನವರ ಕವಿತೆ ಓದಿ ಹೇಳಿದರು.
ಪದಕ್ಕೆ ಪದ ಜೋಡಿಸಿ ಜನಪ್ರಯರಾಗುವ ಸಂಕಲ್ಪ ಮುಂದಿಟ್ಟುಕೊಂಡು ಹೊರಟಿದ್ದೇವೆ. ಪಂಪ, ಅಲ್ಲಮ, ಬಸವ ಇಂದಿಗೂ ಮುಖ್ಯರಾಗುತ್ತಾರೆ. ಜಗತ್ತಿನ ಎಲ್ಲ ಕಾವ್ಯಗಳು ವರ್ತಮಾನವನ್ನು ಕಟ್ಟಿಕೊಡುವಂತಿರಬೇಕು ಎಂದು ಆಶಯ ವ್ಯಕ್ತಪಡಿಸಿದರು. ಡಾ.ಸೂರ್ಯಕಾಂತ ಸುಜ್ಯಾತ ಅಧ್ಯಕ್ಷತೆ ವಹಿಸಿದ್ದರು.
ಚಡ್ಡಿ ಜಗಳ ಎಂಬ ವಿಶ್ವನಾಥ ಭಕರೆ ವಿಡಂಬನಾತ್ಮಕ ಕವನ ರಾಜಕಾರಣಿಗಳ ದೊಂಬರಾಟವನ್ನು ವಿವರಿಸುವಂತಿತ್ತು. ನಾಗೇಂದ್ರಪ್ಪ ಮಾಡ್ಯಾಳೆ ಅವರ ಗುರು ಬಸವ ಕವನವು ಬಸವಣ್ಣನವರ ವ್ಯೋಮ, ಭೂಮ ವ್ಯಕ್ತಿತ್ವವನ್ನು ತಿಳಿಸುವಂತಿತ್ತು. ಶಿವಲೀಲಾ ಕಲಗುರ್ಕಿಯವರ ಬಣ್ಣ ಕವನವು ಹೋಳಿ ಹಬ್ಬದ ಆಚರಣೆಯ ಆಶಯವನ್ನು ಹೇಳುವಂತಿತ್ತು.ಮತಾತೀತವಾಗಿರಲಿ ನಿಮ್ಮ ಮತ ಎನ್ನುವ ಕಸ್ತೂರಿಬಾಯಿ ರಾಜೇಶ್ವರ ಅವರ ಕವಿತೆ ಪ್ರಸ್ತುತವೆನಿಸಿತು.
ಕಲ್ಲಯ್ಯ ಸ್ಥಾವರ ಮಠ, ವಿಜಯಲಕ್ಷ್ಮೀ ಗುತ್ತೇದಾರ, ಬರಗಾಲಿ, ಎಚ್.ಎಸ್.ಬರಗಾಲಿ, ಬಿ.ವಿ.ಪಾಟೀಲ, ಮಹಾದೇವ ಪೂಜಾರಿ ಮುಂತಾದವರ ಕವಿತೆಗಳು ಗಮನ ಸೆಳೆದವು. ಚಂದ್ರಕಲಾ ಪಾಟೀಲ, ಕವಿತಾ ಪಿ. ಮೋರೆ, ಉಷಾ ಗೊಬ್ಬೂರ, ಶಿವಾನಂದ ಗೋಗಾಂವ, ಹಣಮಂತರಾವ ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು. ನಂತರ ವಿವಿಧ ಸಾಧಕರಿಗೆ ಪರಿಷತ್ ನಿಂದ ಸತ್ಕರಿಸಲಾಯಿತು.