ಕಲಬುರಗಿ: ಸಮಾಜದಲ್ಲಿ ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕೆ ಹೊರತು ಹೆಣ್ಣನ್ನು ದ್ವೇಷದಿಂದ, ಕೀಳಿರಿಮೆಯಿಂದ ಕಾಣಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟೀಯ ಮಹಿಳಾ ದಿನಾಚಾರಣೆ ಅಂಗವಾಗಿ ಆಯೋಜಿಸಿದ “ಮಹಿಳಾ ಕಾನೂನು ಅರಿವು ಮತ್ತು ಮಹಿಳಾ ಸಾಧಕೀಯರಿಗೆ ಸನ್ಮಾನ” ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
ಪ್ರತಿ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ, ಗೌರವ ಸಿಗಬೇಕು. ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸತ್ಕರಿಸುವ ಔದಾರ್ಯವು ಸಮಾಜ ತೋರಿಸಬೇಕಿದೆ. ಕುಟುಂಬದ ಜೊತೆಗೆ ವೃತ್ತಿಯಲ್ಲಿಯೂ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುವ ಶಕ್ತಿ ಹೆಣ್ಣಿಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಎಂ. ಚೌಗಲೆ ಮಾತನಾಡಿ, ಸಮಾಜದಲ್ಲಿ ಮಹಿಳೆಯ ಪಾತ್ರ ದೊಡ್ಡದಾಗಿದೆ. ಹೆಣ್ಣು ಅಬಲೆಯಲ್ಲ. ಹೆಣ್ಣೆಂಬ ಕಾರಣಕ್ಕೆ ಮಹಿಳೆಯನ್ನು ಶಿಕ್ಷಣದಿಂದ ವಂಚಿತ ಮಾಡದೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ದೇಶದ ಬೆಳವಣಿಗೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಮಹತ್ವದ್ದಾಗಿದೆ. ಇವೆರಡು ಸರಿಯಿದ್ದರೆ ಮಾತ್ರ ದೇಶ ಸುಧಾರಣೆ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ವಿಭಾಗದ ಅಪರ ಪ್ರಾದೇಶಿಕ ಆಯಕ್ತೆ ಪ್ರಮೀಳಾ ಎಂ.ಕೆ ಅವರು ಮಾತನಾಡುತ್ತಾ, ಪುರಾತನ ಕಾಲದಿಂದಲೂ ಹೆಣ್ಣಿಗೆ ಗೌರವವನ್ನು ಕೊಡುತ್ತಾ ಬಂದಿರುವ ದೇಶ ನಮ್ಮದಾಗಿದೆ. ಮುಂದೆಯು ಇದು ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ ಆರ್., ಸಹಾಯಕ ಆಯುಕ್ತೆ ಮಮತಾ ಕುಮಾರಿ, ಕೆ.ಕೆ.ಆರ್.ಡಿ.ಬಿ. ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಡೇವಿಡ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ನವೀನ್ ಯು., ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ. ಪಾಟೀಲ್, ಸಿ.ಡಿ.ಪಿ.ಓ ಭೀಮರಾಯ ಕಣ್ಣೂರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ನವೀನ್ ಯು. ಸ್ವಾಗತಿಸಿದರೆ, ಸಿ.ಡಿ.ಪಿ.ಓ ಪ್ರವೀಣ ಹೇರೂರ ವಂದಿಸಿದರು. ಡಿ.ಸಿ.ಪಿ.ಓ ಕಚೇರಿಯ ಕಾನೂನು ಮತ್ತು ಪರಿವೀಕ್ಷಾಧಿಕಾರಿ ಭರತೇಶ ಶೀಲವಂತ ಮತ್ತು ಬಾಲ ನ್ಯಾಯ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ ಸಂಪನ್ನೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು.