ಸಂತ್ರಸ್ಥರ ನೆರವಿಗೆ ಸರ್ಕಾರ ಬದ್ಧ : ಸಿಎಂ ಬಿ.ಎಸ್.ಯಡಿಯೂರಪ್ಪ

0
39

ಶಿವಮೊಗ್ಗ: ಮಳೆಯಿಂದ ಬೆಳೆ, ಜಾನುವಾರು, ಆಸ್ತಿಪಾಸ್ತಿ ಹಾನಿಗೊಳಗಾದ ರೈತರ ನೆರವಿಗೆ ಸರ್ಕಾರ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಅವರು ಇಂದು ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಹೋಬಳಿಯ ಹೆಗಲತ್ತಿ ನೆರೆಪೀಡಿತ ಗ್ರಾಮಕ್ಕೆ ಭೇಟಿ ನೀಡಿ, ಹಂಪನಗದ್ದೆ ದೇವರಗುಡ್ಡ ಮನೆಮಲ್ಲೇಶ್ವರ ಬೆಟ್ಟದ ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಸಕ್ರಮ ಹಾಗೂ ಅರಣ್ಯ ಭೂಮಿಯಲ್ಲಿ ಬೆಳೆದ 8ಜನ ರೈತರ ಸುಮಾರು 40ಎಕರೆ ತೋಟದಲ್ಲಿನ ಅಡಿಕೆ, ಬಾಳೆ, ತೆಂಗು ಮತ್ತು ಭತ್ತದ ಬೆಳೆ ನಾಶವಾಗಿದ್ದುದನ್ನು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ ವೀಕ್ಷಿಸಿದರು.

Contact Your\'s Advertisement; 9902492681

ಈಗಾಗಲೇ ಈ ಸಂಬಂಧ ಜಿಲ್ಲೆಯಲ್ಲಿ ಬೆಳೆ ಹಾಗೂ ಆಸ್ತಿಪಾಸ್ತಿ ನಷ್ಟದ ಅಂದಾಜು ಪಟ್ಟಿಯನ್ನು ತಯಾರಿಸಲು ಸೂಚಿಸಲಾಗಿದೆ. ಪ್ರಸ್ತುತ ಈ ಪ್ರದೇಶದಲ್ಲಿ ಹಾನಿಯಾಗಿರುವ ಬೆಳೆಯ ಅಂದಾಜುಪಟ್ಟಿಯನ್ನು 2-3ದಿನಗಳಲ್ಲಿ ಪಡೆದು, ವಿಶೇಷ ಪ್ಯಾಕೇಜ್ ಮಾಡಿ, ಸಹಾಯಧನ ಘೋಷಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಹದಲ್ಲಿ 47ಹಸುಗಳು ಕೊಚ್ಚಿಹೋಗಿದ್ದವು. ಸರ್ಕಾರ ನಿಯಮಾನುಸಾರ ನಿಗಧಿಪಡಿಸಿದಂತೆ ಪ್ರಥಮ ವರ್ತಮಾನ ವರದಿಯನ್ನಾಧರಿಸಿ, ಪ್ರತಿ ಹಸುಗೆ ರೂ.30,000/- ಹಾಗೂ ಕರುಗಳಿಗೆ ರೂ.16,000/-ಗಳಂತೆ ಜಾನುವಾರುಗಳ ಮಾಲೀಕರುಗಳಿಗೆ ಸಾಂಕೇತಿಕವಾಗಿ ಪರಿಹಾರಧನದ ಚೆಕ್ಕನ್ನು ವಿತರಿಸಿದರು.

ನಂತರ ಶಿವಮೊಗ್ಗ ತುಂಗಾ ಹೊಳೆಗೆ ಹೊಂದಿಕೊಂಡಂತಿರುವ ರಾಜೀವ್‍ಗಾಂಧಿ ಬಡಾವಣೆ, ಜೈನ ಗೋಶಾಲೆ, ಬಾಪೂಜಿ ನಗರಗಳ ನೆರೆಬಾದಿತ ಪ್ರದೇಶಗಳಿಗೆ ಭೇಟಿ ನೀಡಿದರು. ನಂತರ ಅವರು ನೆರೆ ಸಂತ್ರಸ್ಥರಿಗಾಗಿ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್‍ನಲ್ಲಿ ಆರಂಭಿಸಲಾಗಿರುವ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೆರೆಹಾವಳಿಯಿಂದ ಬಾದಿತರಾಗಿರುವ ಸುಮಾರು 5,000ಕುಟುಂಬಗಳ ಸದಸ್ಯರು ಬಟ್ಟೆ, ಪಾತ್ರೆ, ಆಹಾರ ಸಾಮಗ್ರಿಗಳ ತಕ್ಷಣ ಖರೀದಿಸಲು ಸರ್ಕಾರದ ವತಿಯಿಂದ ಪ್ರತಿ ಕುಟುಂಬಕ್ಕೆ ರೂ.10,000/-ಗಳ ಸಹಾಯಧನ ನೀಡಲಾಗುವುದು ಎಂದರು.

ಭಾಗಶಃ ಮನೆ ಹಾನಿಗಳೊಳಗಾಗಿರುವ ಮನೆಗಳ ಮಾಲೀಕರಿಗೆ ಮನೆಯ ದುರಸ್ತಿಗೆ ರೂ.1.00ಲಕ್ಷ ಗಳ ಸಹಾಯಧನ ನೀಡಲಾಗುವುದು ಅಲ್ಲದೇ ಪೂರ್ಣ ಪ್ರಮಾಣದಲ್ಲಿ ಮನೆ ನಾಶಗೊಂಡಿದ್ದು, ಮನೆ ಪುನರ್‍ನಿರ್ಮಾಣ ಮಾಡಬೇಕಾದಂತಹ ಸಂತ್ರಸ್ಥರಿಗೆ ರೂ.5.00ಲಕ್ಷ ಗಳ ಸಹಾಯಧನ ಒದಗಿಸಲಾಗುವುದು. ನೆರೆಹಾನಿಗಳೊಗಾದ ರಾಜ್ಯದ ಸುಮಾರು 35,000ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ರೂ.50.00ಲಕ್ಷಗಳ ಆರ್ಥಿಕ ನೆರವು ಒದಗಿಸಲಾಗುವುದು. ನಗರದ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಅಪಾರ್ಟ್‍ಮೆಂಟ್ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ತಜ್ಞರು, ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.

ಈ ಸಂದರ್ಭದಲ್ಲಿ ಸಾಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ, ರುದ್ರೇಗೌಡ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸೊರಬ ತಾಲೂಕಿನ ಅಗಸನಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಲ್ಲಿನ ನೆರೆಹಾವಳಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು.

ಸೊರಬ ತಾಲೂಕಿನ ಮೂಗೂರು ಏತ ನೀರಾವರಿ ಯೋಜನೆಗೆ ರೂ.105ಕೋಟಿ., ಮೂಡಿ ಏತ ನೀರಾವರಿ ಯೋಜನೆಗೆ ರೂ.275.00ಕೋಟಿ ಅನುದಾನ ಮಂಜೂರು ಮಾಡಿದ್ದು, ಶೀಘ್ರದಲ್ಲಿ ಕಾರ್ಯಕ್ರಮದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದ ಅವರು, ಆಗಸ್ಟ್ 15ರಂದು ಸಂಜೆ ದೆಹಲಿಗೆ ತೆರಳಿ, ಪ್ರವಾಹ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಮಂತ್ರಿಗಳನ್ನು ಕೋರಲಾಗುವುದು. ಕೇಂದ್ರ ಸಚಿವರಾದ ಅಮಿತ್‍ಷಾ ಹಾಗೂ ನಿವರ್iಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈಗಾಗಲೇ ರಾಜ್ಯದ ನೆರೆಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದವರು ನುಡಿದರು.

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಅರ್ಹ ರೈತರ ಖಾತೆಗಳಿಗೆ ರೂ.4,000/- ಜಮಾ ಮಾಡಲಾಗುವುದು. ಇದರಲ್ಲಿ ಮೊದಲನೆ ಕಂತಿನ ರೂ.2,000/-ಗಳನ್ನು ಇನ್ನೊಂದು ವಾರದೊಳಗಾಗಿ ಜಮಾ ಮಾಡಲಾಗುವುದು ಎಂದವರು ನುಡಿದರು. ಇದೇ ಸಂದರ್ಭದಲ್ಲಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ಥ ಕುಟುಂಬಗಳ ಸದಸ್ಯರಿಗೆ ಪರಿಹಾರಧನದ ಚೆಕ್‍ನ್ನು ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here