ಕಲಬುರಗಿ: ಹೊರವಲಯದ ಹೊನ್ನಕಿರಣಗಿ ಫಿರೋಜಾಬಾದ್ ನದಿಸಿನ್ನೂರ್ ಮಧ್ಯೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಆರಂಭಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದ್ದು, ಇದೇ ಮಾರ್ಚ್ 24ರಂದು ಕಲಬುರಗಿಯಲ್ಲಿಯೇ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಯತ್ನಿಸಲಾಗುವುದು ಎಂದು ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸದ್ಯಕ್ಕೆ ಶಂಕುಸ್ಥಾಪನೆ ಸಮಾರಂಭ ಬೆಂಗಳೂರಿನಲ್ಲಿ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಈ ಕಾರ್ಯಕ್ರಮವನ್ನು ಕಲಬುರಗಿ ನಗರದಲ್ಲಿಯೇ ಹಮ್ಮಿಕೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ನಾನು ಸಂಸದನಾಗಿ ಆಯ್ಕೆಯಾದ ಬೆನ್ನಲ್ಲೇ ಕಲಬುರಗಿ ಜಿಲ್ಲೆಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ತರುವುದಾಗಿ ಆಶ್ವಾಸನೆ ನೀಡಿದ್ದಲ್ಲದೆ, ಒಂದು ವೇಳೆ ಪಾರ್ಕ್ ಮಂಜೂರಾಗದೆ ಹೋದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದೆ. ಈಗ ಆಶ್ವಾಸನೆಯ ಪ್ರಕಾರ ಜವಳಿ ಪಾರ್ಕ್ ಮಂಜೂರಾಗಿದೆ ಎಂದರು.
ಈ ಹಿಂದೆ ಕಲಬುರಗಿ ಜಿಲ್ಲೆಗೆ ಮಂಜೂರಾದ ಬಹುತೇಕ ಯೋಜನೆಗಳು ಬೇರೆಡೆಗೆ ವರ್ಗಾವಣೆಗೊಂಡಿವೆ. ಅದೇ ರೀತಿಯಾಗಿ ಮೆಗಾ ಜವಳಿ ಪಾರ್ಕ್ ಬೇರೆಡೆಗೆ ವರ್ಗಾವಣೆ ಆಗದು ಎಂಬುದಕ್ಕೆ ಖಾತ್ರಿ ಏನಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಜಾಧವ್, ಯಾವುದೇ ಕಾರಣಕ್ಕೂ ಯೋಜನೆಗೆ ಕೈ ಜಾರುವುದಿಲ್ಲ. ಈಗಾಗಲೇ ಈ ಉದ್ದೇಶಕ್ಕಾಗಿ ಅಗತ್ಯ ಭೂಮಿ ಸಹ ಲಭ್ಯವಿದೆ ಎಂಬುದನ್ನು ಖಾತ್ರಿಪಡಿಸಿದ ನಂತರವೇ ಪಾರ್ಕ್ ಮಂಜೂರಾಗಿದೆ. ಮೇಲಾಗಿ, ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಕಾರಣಕ್ಕೆ ಈ ಜಿಲ್ಲೆಗೆ ಇಂಥದ್ದೊಂದು ಪಾರ್ಕ್ ಅಗತ್ಯವಿದೆ ಎಂಬುದನ್ನು ಮನಗಂಡ ನಂತರವೇ ಮಂಜೂರು ಮಾಡಲಾಗಿದೆ ಎಂದರು.
ಈ ಹಿಂದೆ 2013ರಲ್ಲಿ ಕಲಬುರಗಿಯಲ್ಲಿ ರೈಲ್ವೆ ವಲಯ ಆರಂಭಿಸುವುದಾಗಿ ಈ ಹಿಂದಿನ ಸಂಸದರು ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇವಲ ರಾಜಕೀಯ ಲಾಭಕ್ಕಾಗಿ ಘೋಷಣೆ ಮಾಡಿದ್ದರು. ನಿಜಾರ್ಥದಲ್ಲಿ ಕಲಬುರಗಿಯಲ್ಲಿ ರೈಲ್ವೆ ವಲಯ ಆರಂಭಿಸುವ ಯಾವುದೇ ಉದ್ದೇಶ ಅಂದಿನ (ಯುಪಿಎ) ಕೇಂದ್ರ ಸರಕಾರಕ್ಕೆ ಇರಲಿಲ್ಲ. ಈ ಸಂದರ್ಭದಲ್ಲಿ ಆ ಸುಳ್ಳು ಆಶ್ವಾಸನೆ ಕುರಿತು ತಾವು ಪೆÇೀಸ್ಟ್ ಮಾಟರ್ಂ ಮಾಡಲು ಇಚ್ಛಿಸುವುದಿಲ್ಲ. ಅಂತಹ ಸುಳ್ಳು ಆಶ್ವಾಸನೆಗಳನ್ನು ತಾವು ಈ ಹಿಂದೆಯೂ ನೀಡಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.
ಕಲಬುರಗಿಯಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆ ಆಗುತ್ತಿರುವುದರಿಂದ ಸ್ಥಳೀಯವಾಗಿ ಒಂದು ಲಕ್ಷ ಮಂದಿಗೆ ಉದ್ಯೋಗ ಲಭಿಸಲಿದೆ. ಭಾರತ ಸೇರಿದಂತೆ ಜಗತ್ತಿನ ಸುಪ್ರಸಿದ್ಧ ಜವಳಿ ಉದ್ಯಮಿಗಳು ಇಲ್ಲಿ ತಮ್ಮ ಕಾರ್ಖಾನೆಗಳನ್ನು ಆರಂಭಿಸುವುದರಿಂದ ಬಹು ಮುಖ್ಯವಾಗಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದು ಕಡಿಮೆಯಾಗುತ್ತದೆ ಎಂದು ಡಾ.ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ಧಾಜಿ ಪಾಟೀಲ್, ಬಸವರಾಜ ಬೆಣ್ಣೂರ್ ಇದ್ದರು.
*ನೈಟ್ ಲ್ಯಾಂಡಿಂಗ್ ಶೀಘ್ರ; ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇದೇ ಮಾರ್ಚ್ 31ರೊಳಗೆ ಜಾರಿಗೊಳ್ಳುವ ಸಾಧ್ಯತೆಯಿದೆ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿದರು.
ಈ ನಿಟ್ಟಿನಲ್ಲಿ ಅಗತ್ಯ ಪೂರ್ವಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಖುದ್ದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಹಾಗಾಗಿ ಮಾರ್ಚ್ 31ರ ಗಡುವು ತಪ್ಪಿದರೂ, ಏಪ್ರಿಲ್ ಮೊದಲ ವಾರದೊಳಗೆ ನೈಟ್ ಲ್ಯಾಂಡಿಂಗ್ ಆರಂಭಗೊಳ್ಳುವ ಸಾಧ್ಯತೆಗಳಿವೆ ಎಂದರು.