ಶಹಾಬಾದ: ಭೋವಿ, ಲಂಬಾಣಿ,ಕೊರಚ,ಕೊರಮ ಸಮುದಾಯಗಳಿಗೆ ಮಾರಕವಾಗಿರುವ ನ್ಯಾ. ಸದಾಶಿವ ಆಯೋಗದ ವರದಿ ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ತಾಲೂಕಾ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ನಗರದ ವಾಡಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಾ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರ ಚವ್ಹಾಣ ಮಾತನಾಡಿ, ಬಿಜೆಪಿ ಸರಕಾರ ಮೀಸಲಾತಿ ನಿರ್ಣಯ ಕೈಗೊಳ್ಳುವ ಮೂಲಕ ಲಂಬಾಣಿ,ಭೋವಿ,ಕೊರಮ, ಕೊರಚ ಸಮುದಾಯದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೊಂದು ಅವೈಜ್ಞಾನಿಕ ಮತ್ತು ಅಸಂವಿಧಾನಿಕ ನಿರ್ಧಾರವಾಗಿದೆ.ಈಗಾಗಲೇ ಜನೇವರಿ 10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 99 ಸಮುದಾಯದ ಜನರನ್ನು ಹಮ್ಮಿಕೊಂಡು ವಿರೋಧವನ್ನು ವ್ಯಕ್ತಪಡಿಸಲಾಗಿತ್ತು.
ಲಂಬಾಣಿ,ಭೋವಿ,ಕೊರಮ, ಕೊರಚ ಸಮುದಾಯಕ್ಕೆ ಕೇವಲ ಶೇ 4.5 ಮೀಸಲಾತಿ ನೀಡಿ ಅನ್ಯಾಯ ಮಾಡಿದೆ.ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿ ಮೀಸಲಾತಿ ಗೊಂದಲ ಸೃಷ್ಠಿ ಮಾಡಿ ಸಮುದಾಯದ ನಡುವೆಯೂ ಧ್ವೇಷ ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನ ಮೂಲ ಆಶಯವಾದ ಸಮಾನತೆಯನ್ನು ತೋರುವಲ್ಲಿ ಸರಕಾರ ವಿಫಲವಾಗಿದೆ.ಮಂಬರುವ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ಕೂಡಲೇನ್ಯಾ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ಕೇಂದ್ರ ಸರಕಾರಕ್ಕೆ ಕಳುಹಿಸಿದ ಶಿಫಾರಸ್ಸು ಹಿಂಪಡೆಯಬೇಕು ಎಂದುಹೇಳಿದರು.
ಪ್ರತಿಭಟನೆಯಿಂದ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಸ್ಥಳದಲ್ಲಿ ಭಾರಿ ಸಂಖ್ಯೆಯ ಪೊಲೀಸರು ಜಮಾಯಿಸಿದ್ದರು.ಮುನ್ನೆಚರಿಕೆ ಕ್ರಮವಾಗಿ ಪಿಐ ರಾಘವೇಂದ್ರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.
ರವಿ ಚವ್ಹಾಣ, ನಾಮದೇವ ರಾಠೋಡ, ದೇವರಾಜ ರಾಠೋಡ, ಚಂದು ಜಾಧವ, ಕಿರಣ ಚವ್ಹಾಣ, ವೆಂಕಟೇಶ ಪವಾರ, ದಿಲೀಪ ನಾಯಕ ಇತರರು ಮಾತನಾಡಿದರು. ತಾಲೂಕಾ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಕಳ್ಳೊಳ್ಳಿ.ಬಿ.ಕುಸಾಳೆ,ಸುನೀಲ ಚವ್ಹಾಣ, ನರಸಿಂಗ ರಾಠೋಡ, ರಾಮ ಚವ್ಹಾಣ,ರಾಮು ಕುಸಾಳೆ, ರಮೇಶ ಮೇಲಗಿರಿ ಪವಾರ, ರಾಮಸ್ವಾಮಿ ದೇವಕರ್, ಬಾಬು ಪವಾರ, ಬಸವರಾಜ ದಂಡಗುಲಕರ್,ವೆಂಕಟೇಶ ಚೌದ್ರಿ,ತಿಪ್ಪಣ್ಣ ಕಣಸೂರ,ರಮೇಶ ಪವಾರ ಸೇರಿದಂತೆ ನೂರಾರು ಜನರು ಇದ್ದರು.