ಕಲಬುರಗಿ; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಾದ್ಯಂತ ಹೊಂದಿರುವ ಆಯುಧ ಲೈಸೆನ್ಸ್‍ದಾರರ ಆಯುಧ (ಫೈರ್ ಆಮ್ರ್ಸ್)ಗಳನ್ನು (ರಾಷ್ಟ್ರೀಕೃತ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ ಅವರಿಂದ ಅನುಮೋದಿತ ಶೆಡ್ಯೂಲ್ ಬ್ಯಾಂಕುಗಳ ಸೆಕ್ಯೂರಿಟಿ ಗಾರ್ಡಗಳ ಆಯುಧಗಳನ್ನು ಹೊರತುಪಡಿಸಿ) ತಕ್ಷಣದಿಂದಲೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಯಶವಂತ ವಿ. ಗುರುಕರ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಭಾರತೀಯ ಆಯುಧ ಕಾಯ್ದೆ 1959ರ ಕಲಂ(4), ಕಲಂ (21), 24ಎ(1)ರನ್ವಯ ಹೊರಡಿಸಿರುವ ಈ ಆದೇಶದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಅಂದರೆ ದಿ:20-05-2023ರ ವರೆಗೆ ಸಿ.ಆರ್.ಪಿ.ಸಿ. 1973 ಕಲಂ 144 ರಡಿ ಯಾವುದೇ ಲೈಸೆನ್ಸ್‍ದಾರರು ತಮ್ಮ ಆಯುಧವನ್ನು ಚುನಾವಣೆ ಸ್ಥಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತು ಒಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.