ಕಲಬುರಗಿ : 2023 ರ ವಿಧಾನ ಸಭಾ ಚುನಾವಣೆಯಲ್ಲಿ ಆಯಾ ರಾಜಕಿಯ ಪಕ್ಷಗಳಿಗೆ ಕಲ್ಯಾಣ ಕರ್ನಾಟಕದ ಕಲ್ಯಾಣದ ಬಗ್ಗೆ ಪ್ರಣಾಳಿಕೆಯಲ್ಲಿ ಅಧಿಕೃತವಾಗಿ ಸೇರಿಸಿ ಘೋಷಣೆ ಮಾಡಿ ಮತ ಯಾಚಿಸಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ.
371ನೇ(ಜೆ) ಕಲಂ ಸಂವಿಧಾನ ತಿದ್ದುಪಡಿಯ ಸವಲತ್ತುಗಳು ಸಮರ್ಪಕವಾಗಿ ಮತ್ತು ನ್ಯಾಯಬದ್ಧವಾಗಿ ಸಿಗಲು ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡಬೇಕು. ಪ್ರತ್ಯೇಕ ಮಂತ್ರಾಲಯದಲ್ಲಿ ನೇಮಕಾತಿ, ಮುಂಬಡ್ತಿ, ಶೈಕ್ಷಣಿಕ ಪ್ರವೇಶಗಳು, ಅಭಿವೃದ್ಧಿ ಮಂಡಳಿ, ಸಂಪುಟ ಉಪ ಸಮಿತಿ ಸೇರಿದಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಮತ್ತು ಭವಿಷ್ಯದಲ್ಲಿ ಇದರಡಿ ಜಾರಿಯಾಗುವ ಎಲ್ಲಾ ವಿಷಯಗಳು ಇದರಲ್ಲಿ ಒಳಗೊಂಡಿರಬೇಕು.
371ನೇ(ಜೆ) ಕಲಂ ತಿದ್ದುಪಡಿಯಾಗಿ ನೇಮಕಾತಿ ಮತ್ತು ಮುಂಬಡ್ತಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾನದಂಡದ ಮಾದರಿಯಂತೆ ಅನುಷ್ಠಾನ ಮಾಡಬೇಕು. 371ನೇ(ಜೆ) ಕಲಂ ನಿಯಮಗಳಂತೆ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಕಚೆರಿಗಳು ವಿಭಾಗೀಯ ಕಚೇರಿ ಕಲಬುರಗಿಗೆ ಸ್ಥಳಾಂತರ ಮಾಡಬೇಕು.
371ನೇ(ಜೆ) ಕಲಂ ಗೆ ಸಂಬಂಧಿಸಿದಂತೆ, ನೇಮಕಾತಿ, ಮುಂಬಡ್ತಿಗಳ ತಕರಾರುಗಳ ಶೀಘ್ರ ನಿವಾರಣೆಗೆ ಪ್ರತ್ಯೇಕ ಟ್ರಿಬ್ಯೂನಲ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಸ್ಥಾಪಿಸಬೇಕು. 371ನೇ(ಜೆ) ಕಲಂ ತಿದ್ದುಪಡಿಯಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ವಾಯತ್ತ ಮಂಡಳಿಯಾಗಿದ್ದು, ಇದರಿಂದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ 10 ವರ್ಷದ ಗಡುವಿನ ಕಲ್ಯಾಣದ ಅಭಿವೃದ್ಧಿಗೆ ವೈಜ್ಞಾನಿಕ ಕ್ರೀಯಾ ಯೋಜನೆ ರೂಪಿಸಿ ಇದಕ್ಕೆ ರಾಜ್ಯ ಸರಕಾರದ ಜೊತೆ ಕೇಂದ್ರದ ವಿಶೇಷ ಪ್ಯಾಕೇಜಿನ ಹಣ ಪಡೆಯಬೇಕು.
ಕೆ.ಕೆ.ಆರ್.ಡಿ.ಬಿ.ಗೆ ಬಲಿಷ್ಠಗೊಳಿಸಲು ಈ ಹಿಂದಿನಂತೆ ಇದರ ಅಧ್ಯಕ್ಷ ಸ್ಥಾನ ಕಲ್ಯಾಣ ಕರ್ನಾಟಕದ ಮಂತ್ರಿಯನ್ನು ಅಧ್ಯಕ್ಷರನ್ನಾಗಿ ಮಾಡಲು ನಿಯಮದಲ್ಲಿ ತಿದ್ದುಪಡಿ ಮಾಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಕಾಲಮಿತಿಯ ಪ್ರಗತಿಗೆ ಡಾ. ನಂಜುಂಡಪ್ಪ ವರದಿಯ ಮಾನದಂಡದ ಆಧಾರವನ್ನಿಟ್ಟುಕೊಂಡು ಒಂದು ಗ್ರಾಮ ಪಂಚಾಯತಿಯನ್ನು ಸೂಚ್ಯಂಕ ವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ವರದಿ ತಯಾರಿಸಿ ಅದರ ಆಧಾರದ ಮೇಲೆ ವೈಜ್ಞಾನಿಕ ಕ್ರೀಯಾ ಯೋಜನೆ ರೂಪಿಸಬೇಕು.
371ನೇ(ಜೆ) ಕಲಂ ಅಡಿ ನಮ್ಮ ಪಾಲಿನ ಖಾಲಿ ಇರುವ ಸಹಸ್ರಾರು ಹುದ್ದೆಗಳು ಸಹಜ ಪ್ರಕ್ರಿಯೆಯಂತೆ ಭರ್ತಿ ಮಾಡಬೇಕು. ಅದರಂತೆ ಮುಂಬಡ್ತಿಗಳು ಸಹ ಒಂದು ದಿನವು ತಡೆಯದೆ ಬಡ್ತಿಗಳು ನೀಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಕಲ್ಯಾಣದ ವಿಶ್ವವಿದ್ಯಾಲಯಗಳ, ಶಾಲಾ ಕಾಲೇಜುಗಳ, ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು.
ರಾಜ್ಯದ ಬಜೆಟನಲ್ಲಿ ಕಲ್ಯಾಣ ಕರ್ನಾಟಕದ ಪ್ರತ್ಯೇಕ ಬಜೆಟ್ ಮಂಡಣೆ ಮಾಡಬೇಕು. ಕಲ್ಯಾಣ ಕರ್ನಾಟಕದ ಮತ್ತು ನಮ್ಮ ರಾಜ್ಯದ ನಮ್ಮ ಪಾಲಿನ ಕೃಷ್ಣಾ ಹಾಗೂ ಗೋದಾವರಿ ಕಣಿವೆ ಪ್ರದೇಶದ ನೀರು ಕಾಲಮಿತಿಯಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು. ಕಲ್ಯಾಣ ಕರ್ನಾಟಕದ ಬೃಹತ್, ಮಧ್ಯಮ ಮತ್ತು ಸಣ್ಣ ಎಲ್ಲಾ ನೀರಾವರಿ ಯೋಜನೆಗಳು ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಸೇರಿಸಬೇಕು.
ತೊಗರಿ ಮಂಡಳಿಗೆ ಬಲಿಷ್ಠ ಸ್ವರೂಪ ನೀಡಿ ಇದರ ಮುಖಾಂತರ ಬೆಳೆಗೆ ಪೆÇ್ರೀತ್ಸಾಹ ಧನ, ಬೆಂಬಲ ಬೆಲೆ ನೀಡಿ ಖರೀದಿಸಿ ಇದರ ಉತ್ಪನ್ನಗಳ ವಿವಿಧ ಸ್ವರೂಪದ ಮಾರುಕಟ್ಟೆ ನಿರ್ಮಾಣ ಮಾಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಎಣ್ಣೆಕಾಳುಗಳ ಬೆಳೆಗೆ ಪೆÇ್ರೀತ್ಸಾಹ ಧನ ನೀಡಿ ಸಣ್ಣ ರೈತರಿಗೆ ಸ್ಪಂದಿಸಬೇಕು. ಕಲ್ಯಾಣ ಕರ್ನಾಟಕದ ಜನರು ಗುಳೆ ಹೋಗುವುದನ್ನು ನಿಲ್ಲಿಸಲು ಕೃಷಿಗೆ ಉತ್ತೇಜನ ನೀಡಿ ಯುವಕರಿಗೆ ಉದ್ಯೋಗ ಮಾಡಿಕೊಡಲು ಆರ್ಥಿಕ ಅನುಕೂಲತೆ ಕಲ್ಪಿಸಿಕೊಡಬೇಕು. ಮತ್ತು ಕೃಷಿಯೇತರ ಉದ್ಯೋಗಗಳು ಸಹ ಸೃಷ್ಟಿ ಮಾಡಬೇಕು.
ಕಲ್ಯಾಣ ಕರ್ನಟಕದ ನೀರಾವರಿಯೋಜನೆಗಳು ಹಾಗೂ ಇನ್ನೀತರೆ ಘಟಕಗಳ ಸ್ಥಾಪನೆಗೆ ಜಮೀನು ನೀಡಿದ ರೈತ ಸಂತ್ರಸ್ಥರಿಗೆ ಸಮರ್ಪಕವಾಗಿ ವೈಜ್ಞಾನಿಕ ಪರಿಹಾರ ಹಣ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಉತ್ತೀರ್ಣ ಪರಿಣಾಮಗಳು ಎತ್ತರಕ್ಕೇರಲು ವಾಸ್ತವಿಕ ನೆಲೆಗಟ್ಟಿನ ಮೇಲೆ ವೈಜ್ಞಾನಿಕ ಕ್ರಮ ಕೈಗೊಂಡು ಇದರ ಮೇಲೆ ಕಠಿಣ ನಿಗಾ ಇಡಬೇಕು.
ಬೀದರ ಮತ್ತು ಕಲಬುರಗಿಯಲ್ಲಿ ನೀಮ್ಝ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನಂಜುಂಡಪ್ಪ ವರದಿಯಂತೆ ರಾಯಚೂರಿಗೆ ಐ.ಐ.ಟಿ. ಮಂಜೂರು ಮಾಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು.
ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಬೇಕು. ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮಾರ್ಗವಾಗಿ ಕಲ್ಯಾಣ ಎಕ್ಸಪ್ರೆಸ್ ರೈಲು ಆರಂಭವಾಗಬೇಕು.ಈ ಮಾರ್ಗದಿಂದ ಎರಡು ಹೊಸ ರೈಲುಗಳು ಬೆಂಗಳೂರಿಗೆ ಹೋಗಲು ಆರಂಭಿಸಬೇಕು. ಕಲಬುರಗಿಯಲ್ಲಿ ಏಳು ಪ್ಲಾಟ ಫಾರಂಗಳ ನಿರ್ಮಾಣ ಮಾಡಬೇಕು. ಸೊಲಾಪೂರ-ಮುಂಬೈ, ಸೊಲಾಪೂರ ಒಂದೆ ಭಾರತ ರೈಲು, ಕಲಬುರಗಿಯವರೆಗೆ ವಿಸ್ತರಣೆ ಮಾಡಬೆಕು. ಕಲಬುರಗಿ ಎರಡನೆ ಪಿಟ್ ಲೈನ್ ಕಾರ್ಯ ಕೈಗೊಳ್ಳಬೇಕು.
ಕಲ್ಯಾಣ ಪಥ್ ಯೋಜನೆಯಂತೆ ಹುಮನಾಬಾದ, ಕಲಬುರಗಿ, ಶಹಾಪೂರ ಲಿಂಗಸೂಗುರು ಶಿರಗುಪ್ಪ ಮೂಲಕ ಬೀದರ ಬಳ್ಳಾರಿ ಚತುಸ್ಪಥ ರಸ್ತೆ ಕಾಲಮಿತಿಯಲ್ಲಿ ಕೈಗೊಳ್ಳಬೇಕು. ವಿಜಯಪೂರ-ಬಾಗಲಕೋಟ ಮೂಲಕ ಹುಬ್ಬಳ್ಳಿ ನಾಲ್ಕು ಪಥ ರಸ್ತೆಗೆ ಕೇಂದ್ರ ಮಂಜೂರಾತಿ ನೀಡಬೇಕು. ಸೋಲಾಪೂರ, ಕಲಬುರಗಿ, ರಾಯಚೂರ ಚತುಸ್ಪಥ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಬೇಕು. ಕಲಬುರಗಿ ಎರಡನೇ ವರ್ತುಲ ರಸ್ತೆ ಆರಂಭಿಸಬೇಕು.
ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ಹೂಡಿಕೆದಾರರನ್ನು ವಿಶೇಷ ಸವಲತ್ತು ನೀಡಿ ಕೈಗಾರಿಕೆ ಸ್ಥಾಪನೆಗೆ ಆಹ್ವಾನಿಸಬೇಕು. ಕಲಬುರಗಿಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ ಕಾಲಮಿತಿಯಲ್ಲಿ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ ಬಸವಕಲ್ಯಾಣ ಮತ್ತು ಸೇಡಂ (ರಾಷ್ಟ್ರಕೂಟ ಹೆಸರಿನ) ಎರಡು ಜಿಲ್ಲೆಗಳನ್ನು ಘೋಷಣೆ ಮಾಡಿ ನಮ್ಮ ಶ್ರೀಮಂತ ಇತಿಹಾಸ ಎತ್ತಿ ಹಿಡಿಯಬೇಕು.
ಕಲಬುರಗಿ ದಕ್ಷಿಣ, ಉತ್ತರ ಮತ್ತು ಗ್ರಾಮೀಣ ಕ್ಷೇತ್ರದ ಶಹಬಾದ ಸೇರಿಸಿ ಬೃಹತ್ ಕಲಬುರಗಿ ಮಹಾನಗರ ಪಾಲಿಕೆ ನಿರ್ಮಾಣ ಮಾಡಬೇಕು.
ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸಬೇಕು. ಹಂಪಿ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲಾ ಪ್ರವಾಸಿ ತಾಣಗಳಿಗೆ ಒಂದೆ ವಲಯ (ಸರ್ಕ್ಯೂಟ್)ಮಾಡಬೇಕು. ಕಲಬುರಗಿಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಉದ್ಯೋಗ ಸೃಷ್ಟಿಗೆ ಹಾಗೂ ಬಡ, ಮಧ್ಯಮ ವರ್ಗದವರಿಗೆ ಸ್ವಂತ ಮನೆ, ಸ್ವಂತ ಉದ್ಯೋಗಕ್ಕಾಗಿ ಕಲಬುರಗಿಯಲ್ಲಿ ನವ ನಗರ ನಿರ್ಮಾಣ ಮಾಡಬೇಕು.
ಮಹಾನಗರದಲ್ಲಿ ಐದು ಜನದಟ್ಟಣೆ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. (ರಾಮಮಂದಿರ, ಬಸ್ ಸ್ಟ್ಯಾಂಡ್, ಹುಮನಾಬಾದ ಬೇಸ್, ಖರ್ಗೆ ಪೆಟ್ರೋಲ್ ಪಂಪ್,ಪಟೇಲ್ ವೃತ್ತ) ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾ ಸಂಕೀರ್ಣ ಸ್ಥಾಪನೆ ಮಾಡಿ, ಕ್ರೀಕೇಟ, ಫುಟಬಾಲ್, ಬಾಸ್ಕೆಟಬಾಲ್ ಹಾಗೂ ಇತರೆ ಕ್ರೀಡೆಗಳಿಗೆ ಅವಕಾಶ ನೀಡಬೇಕು.
ಕಲಬುರಗಿಗೆ ಮಂಜೂರಾಗಿರುವ ಅರ್.ಟಿ.ಐ. ಕಮಿಷನರೇಟ್ ಕಚೇರಿ ಕಲಬುರಗಿಯಲ್ಲಿಯೇ ಆರಂಭಿಸಬೇಕು.
ಕಲ್ಯಾಣ ಕರ್ನಾಟಕದ ಮೇಲಿನ ಉಲ್ಲೇಖಿತ ವಿಷಯಗಳನ್ನೊಳಗೊಂಡು ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಮತ್ತು ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ಪೂರಕವಾಗಿ ಪ್ರತ್ಯೇಕ ಪ್ರಣಾಳಿಕೆ ಆಯಾ ಪಕ್ಷದವರು ಬಿಡುಗಡೆ ಮಾಡಬೇಕು. ಮನೀಷ್ ಜಾಜು, ಲಿಂಗರಾಜ ಸಿರಗಾಪೂರ, ಡಾ.ಮಾಜಿದ್ ದಾಗಿ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಅಸ್ಲಂ ಚೌಂಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.