ಕಲಬುರಗಿ: ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗ ಮತ್ತು ಮೆರಿಟ್ ಪಡೆದವರು ಮೊದಲು ಮೆರಿಟ್‍ನಲ್ಲಿ ಸ್ಥಾನ ನೀಡಬೇಕು. ಉಳಿದಂತೆ ವರ್ಟಿಕಲ್ ಮೀಸಲಾತಿ ಅನುಸರಿಸಿ ಉಳಿದವರಿಗೆ 371 (ಜೆ) ಅಡಿಯಲ್ಲಿ ಮೀಸಲು ಕಲ್ಪಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ ತಿಳಿಸಿದರು.
ಬಡ್ತಿ ನೀಡುವ ಪ್ರಕ್ರಿಯೆಯಲ್ಲಿಯೂ ಇದನ್ನು ಅನುಸರಿಸಬೇಕು. ಅಲ್ಲದೆ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಶೇ.8 ರಷ್ಟು ಮೀಸಲಾತಿ ಕಲ್ಪಿಸಲು ಸಹ ಸೂಚಿಸಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದರಿಂದಾಗಿ ಸಾಕಷ್ಟು ಜನರಿಗೆ ಹೆಚ್ಚಿನ ಲಾಭ ಸಿಗಲಿದೆ.
ಸರ್ಕಾರವು ಈ ಕುರಿತು 24-3-2023 ರಂದೇ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ 1-2-2023 ರಂದು ಸುತ್ತೋಲೆ ಹೊರಡಿಸಿ, ಗೊಂದಲ ನಿವಾರಣೆ ಮಾಡಲಾಗಿದೆ. ಅಲ್ಲದೆ ಈ ಹಿಂದೆ 6-6-2020 ರಂದು ಹೊರಡಿಸಿದ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೆಎಟಿ ನ್ಯಾಯಾಧೀಶರಾದ ಕೆ.ಭಕ್ತವತ್ಸಲಂ ಅವರಿದ್ದ ನ್ಯಾಯಪೀಠದ ಆದೇಶದಂತೆ ಸರ್ಕಾರವು ಪರಿಷ್ಕರಣೆ ಮಾಡಿ ಹೊಸ ಆದೇಶ ಹೊರಡಿಸಿದೆ. ಈ ಮೊದಲು ಕಲ್ಯಾಣ ಕರ್ನಾಟಕದವರು ಆ ಭಾಗದಲ್ಲಿ ಮತ್ತು ನಿಗದಿತ ಮೀಸಲಾತಿ ಪಡೆದುಕೊಳ್ಳಲು ಅವಕಾಶವಿತ್ತು. ಆದರೆ, ಮೆರಿಟ್ ಪಡೆದವರಿಗೂ ಅದೇ ಅನ್ವಯ ಆಗುತ್ತಿತ್ತು. ಅವರು ಜನರಲ್ ಮೆರಿಟ್ ಕೋಟಾದಲ್ಲಿ ಸ್ಥಾನ ನೀಡದೆ, 371 ಜೆ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು.
ಆದರೆ, ಇನ್ಮುಂದೆ ಯಾವ ಮೀಸಲು ಪಡೆಯಬೇಕು ಎಂಬುದನ್ನು ಅಜಿಯಲ್ಲಿ ಕೇಳುವಂತಿಲ್ಲ. ಬದಲಿಗೆ ಎಸ್ಸಿ ಮೀಸಲಾತಿ ಪಡೆಯುವರು ಹೆಚ್ಚಿನ ಅಂಕ ಪಡೆದು ಮೆರಿಟ್ ಕೋಟಾದಲ್ಲಿ ಬರುವಂತೆ, ಈಗ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಲಾಭ ಸಿಗಲಿದೆ. ಇದರಿಂದಾಗಿ ಕಡಿಮೆ ಅಂಕ ಪಡೆದವರಿಗೆ ಮೀಸಲಾತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪದವಿ ಕಾಲೇಜು ಶಿಕ್ಷಕರ ನೇಮಕ ಪಟ್ಟಿಯ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಿ ಮೊರೆ ಹೋಗಿದ್ದಾಗ, ಈ ಆದೇಶ ಬಂದಿರುವುದರಿಂದ 1218 ಶಿಕ್ಷಕರ ಪಟ್ಟಿ ಮರು ಪರಿಷ್ಕರಣೆ ಆಗುವುದರಿಂದ ಅಂದಾಜು ನೂರು ಅಭ್ಯರ್ಥಿಗಳು ಹೆಚ್ಚುವರಿಯಾಗಿ ನೇಮಕಗೊಳ್ಳಲಿದ್ದಾರೆ ಎಂದು ನಮೋಶಿ ವಿವರಿಸಿದರು.
ಮೀಸಲಾತಿ ನಿರ್ಧಾರ ಸ್ವಾಗತ: ದಲಿತ ಸಮುದಾಯದವರಿಗೆ ಒಳಮೀಸಲಾತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ. ಇದನ್ನು ಎಲ್ಲರು ಸ್ವಾಗಿಸಿದ್ದಾರೆ ಎಂದು ನಮೋಶಿ ತಿಳಿಸಿದರು. ಇದರಿಂದಾಗಿ ಎಲ್ಲ ದಲಿತ ಸಮುದಾಯದವರಿಗೆ ಅನುವು ಆಗಲಿದೆ ಎಂದು ಹೇಳಿದರು. ಹೀಗಾಗಿ ಸುಳ್ಳು ಹೇಳುವವರ ಬಗ್ಗೆ ಗಮನ ನೀಡಬಾರದು ಎಂದು ಮನವಿ ಮಾಡಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉೀವಾಡಗಿ, ಮುಖಂಡರಾದ ಡಾ.ಶಂಭುಲಿಂಗ ಬಳಬಟ್ಟಿ ಇತರರಿದ್ದರು.