ಜತ್ತ ತಾಲ್ಲೂಕಿನ ಸಂಖದಲ್ಲಿ 3ನೇ ಮಹಾರಾಷ್ಟ್ರ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

0
17
  • ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರಧಾನ ವೇದಿಕೆ
  • ಗಡಿನಾಡು ಕನ್ನಡಿಗರಾದ ನಾವೇಲ್ಲ ‘ಬೇಲಿ ಮೇಲಿನ ಹೂಗಳಿದ್ದಂತೆ’ : ಮಾಜಿ ಸಚಿವೆ ಲೀಲಾದೇವಿ ಪ್ರಸಾದ್

ಸೊಲ್ಲಾಪುರ : ಇದು ಗಡಿನಾಡು ಸಾಹಿತ್ಯ ಸಮ್ಮೇಳನ, ನಮ್ಮ ಗಡಿ ಸಂರಕ್ಷಣೆ ಬಗ್ಗೆ ಸರಕಾರ ಚಿಂತನೆ ಮಾಡಬೇಕು. ಮಹಾರಾಷ್ಟçದಿಂದ ಕರ್ನಾಟಕಕ್ಕೆ ಬರುವ ಪ್ರದೇಶಗಳು ಬರಲೇಬೇಕು. ಅಲ್ಲದೆ ಕರ್ನಾಟಕದಿಂದ ಮಹಾರಾಷ್ಟçಕ್ಕೆ ಹೋಗುವ ಪ್ರದೇಶಗಳು ಹೋಗಲೇಬೇಕು. ಆಗ ಮಾತ್ರ ಎರಡು ರಾಜ್ಯಗಳ ಗಡಿ ಸಮಸ್ಯೆ ಬಗೆಹರಿಯುತ್ತದೆ. ಗಡಿನಾಡು ಕನ್ನಡಿಗರಾದ ನಾವೇಲ್ಲ ‘ಬೇಲಿ ಮೇಲಿನ ಹೂಗಳಿದ್ದಂತೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಗಡಿನಾಡು ಘಟಕದ ವತಿಯಿಂದ ಜತ್ತ ತಾಲ್ಲೂಕಿನ ಸಂಖ ಗ್ರಾಮದ ಶ್ರೀ ಗುರುಬಸವ ವಿದ್ಯಾಮಂದಿರದ ಆವರಣದಲ್ಲಿ ಆಯೋಜಿಸಿದ್ದ ೩ನೇ ಮಹಾರಾಷ್ಟ್ರ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಜನರು ಶೇಕಡಾ ೨೦ ರಿಂದ ೨೪ ರಷ್ಟು ಇದೆ. ಇದು ನಮಗೇಲ್ಲ ನೋವಿನ ಸಂಗತಿ. ನಾನು ಸಚಿವೆಯಾಗಿದ್ದಾಗ ಬೆಂಗಳೂರಿನಲ್ಲಿ ಸುಮಾರು ಒಂದು ನೂರು ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆದಿದ್ದೇನೆ. ಆದರೆ ಇಂಗ್ಲೀಷ ಶಾಲೆಗಳಿಂದ ಕನ್ನಡ ಶಾಲೆಗಳು ಮಾಯವಾಗಿ ಬಿಟ್ಟಿವೆ. ಇಂದು ನಾವೆಲ್ಲ ಮನೆಗಳಲ್ಲಿ ಕನ್ನಡವನ್ನು ಮಾತನಾಡುವುದಿಲ್ಲ. ಹೀಗಾಗಿ ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದರು.

ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೋಟ್ಯಾಂತರ ರೂ. ಹಣ ಬಿಡುಗಡೆ ಮಾಡಿದ್ದೇನೆ. ಅಲ್ಲದೆ ಕನ್ನಡ ಭವನ ನಿರ್ಮಾಣ ಮಾಡಿದ್ದೇನೆ. ಮಾತಿಗಿಂತ ಕೃತಿ ಮುಖ್ಯ, ನಮ್ಮ ಮಾತುಗಳು ಕೃತಿಯಲ್ಲಿ ಇಳಿಯಬೇಕು. ಮಾತು ಮಾತಾಗಿ ಉಳಿಯಬಾರದು ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

ಭಾಷೆಗಳು ಬೇರೆ-ಬೇರೆಯಾಗಿದ್ದರೂ ಭಾವನೆ ಒಂದೆಯಾಗಿದೆ. ಹೀಗಾಗಿ ನಮ್ಮಲ್ಲಿ ಭಾಷಾ ಬೇದ-ಭಾವಗಳಿರಬಾರದು. ನಾವೆಲ್ಲರೂ ಒಂದು, ನಾವೇಲ್ಲರೂ ಬಂಧು ಎಂಬ ಮನೋಭಾವನೆಯಿಂದ ಬದುಕಬೇಕು. ಅನೇಕ ಜಾತಿ, ಧರ್ಮಗಳಿವೆ, ಬೇರೆ-ಬೇರೆ ಭಾಷೆಗಳಿವೆ. ಆದರೂ ನಾವೇಲ್ಲರೂ ಒಂದಾಗಿದ್ದೇವೆ. ನಾವೆಲ್ಲ ಭಾಷಾ ಶ್ರೀಮಂತರಾಗಬೇಕು. ಧರ್ಮವಾದಿಗಿಂತಲೂ, ವಿಜ್ಞಾನವಾದಿಯಾಗಬೇಕು. ಮನುಷ್ಯನಿಗೆ ಧರ್ಮವಿದೆ. ಧರ್ಮಕ್ಕಾಗಿ ಮನುಷ್ಯನಿಲ್ಲ. ಜಾತಿ, ಬೇದ-ಭಾವ ತೊರೆದು ಎಲ್ಲರಿಗೂ ಸಮಾನತೆಯನ್ನು ನೀಡಿದವರು ಬಸವಣ್ಣನವರು. ಇಲ್ಲಿ ಕನ್ನಡ-ಮರಾಠಿ ಭಾಷಿಕರಲ್ಲಿ ಅನೋನ್ಯವಾದ ಬಾಂಧವ್ಯಗಳಿವೆ ಎಂದು ಜತ್ತ ಮಾಜಿ ಶಾಸಕ ವಿಲಾಸರಾವ ಜಗತಾಪ ಅಭಿಪ್ರಾಯಪಟ್ಟರು.

ಸಮ್ಮೇಳನದ ಸರ್ವಾಧ್ಯಕ್ಷ ಎಮ್.ಎಸ್. ಸಿಂಧೂರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ೧೯೫೬ ರಲ್ಲಿ ಭಾರತದಲ್ಲಿ ಭಾಷಾವಾರ ಪ್ರಾಂತ ರಚನೆಯ ಗಾಳಿ ಪ್ರಾರಂಭವಾಗಿದ್ದು, ಇದರಿಂದ ಗಡಹಿಂಗ್ಲಜ, ಜತ್ತ, ದಕ್ಷಿಣ ಸೊಲ್ಲಾಪುರ ಹಾಗೂ ಅಕ್ಕಲಕೋಟ ಸೇರಿದಂತೆ ಒಟ್ಟು ೨೪೭ (ಹಳ್ಳಿಗಳು) ಕನ್ನಡ ಪ್ರದೇಶಗಳು ನೆರೆ ರಾಜ್ಯಗಳಲ್ಲಿ ಉಳಿದುಕೊಂಡವು. ಇವೆಲ್ಲವೂ ಗಡಿ ಭಾಗವೆಂದೆನಿಸಿಕೊಳ್ಳುತ್ತವೆ. ಇಲ್ಲಿನ ಜನ ಕರ್ನಾಟಕದಲ್ಲಿ ಸೇರ್ಪಡೆಯಾಗಲು ಇಚ್ಛಿಸುತ್ತಾರೆ. ಕಾರಣ ಅಭಿವೃದ್ಧಿ ಹಾಗೂ ಮುಂದಿನ ಭವಿಷ್ಯದ ಬಗ್ಗೆ ಅವರು ಚಿಂತಿಸುತ್ತಾರೆ. ಕರ್ನಾಟಕದ ಕೆಲ ಮಹನೀಯರು ಇದನ್ನು ಆರ್ಥಿಕ ದೃಷ್ಠಿಯಿಂದ ತೂಗಿ ನೋಡುತ್ತಾರೆ.

ಗಡಿನಾಡು ಎಂಬುವುದು ಯಾವುದಕ್ಕೂ ಕಡಿಮೆಯಿಲ್ಲಾ, ಉಡಿಯ ತುಂಬುವೆ ಕನ್ನಡಾಂಬೆಗೆ, ಮುಡಿಗೇರಿಸುವೆ ಕನ್ನಡ ಪದಗಳ | ಎಂದು ಹಾಡಿ ತಣಿದರು ಕವಿವರ್ಯರು. 

ಭಾಷೆ ಸಂಪರ್ಕ ಮಾಧ್ಯಮ :  ವ್ಯಕ್ತಿ ವ್ಯಕ್ತಿಗಳ ನಡುವೆ, ವ್ಯಕ್ತಿ ಸಮೂಹಗಳ ನಡುವೆ, ಸಮೂಹ-ಸಮೂಹಗಳ ನಡುವೆ ಅಂದರೆ ಪ್ರಾಂತ, ದೇಶ-ವಿದೇಶಗಳ ನಡುವೆ ಸಂಪರ್ಕ ಸಾಧಿಸಲು ಬಾಷೆ ಮುಖ್ಯ ಸಾಧನವಾಗಿದೆ. ಅಂತೆಯೇ ಮಾತೃ ಭಾಷೆ, ಪ್ರಾಂತೀಯ ಭಾಷೆ, ರಾಷ್ಟç ಭಾಷೆ, ವಿಶ್ವ ಭಾಷೆಗಳು ಬೆಳೆದು ಬಂದವು. ವ್ಯಕ್ತಿ ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಭಾಷೆಯೇ ಮುಖ್ಯಸ್ಥಾನ. ಆದ್ದರಿಂದ  ಮಾತೃ ಭಾಷೆಗೆ ಸಾಮಾಜಿಕವಾಗಿಯೂ, ರಾಜಕೀಯವಾಗಿಯೂ ಸ್ಥಾನ ದೊರೆಯಬೇಕು. ಏಕೆಂದರೆ, ವ್ಯಕ್ತಿಯ ಬದುಕಿಗೆ ಅದು ಸಾಧನವಾಗಿದೆ. ರಾಜಕೀಯವಾಗಿ ಬಾಷೆಗೆ ಪ್ರಾಮುಖ್ಯತೆಯ ದೊರೆಯದಿದ್ದರೆ, ವ್ಯಕ್ತಿಯ ಆ ಸಮೂಹದ ಪ್ರಗತಿ ಕುಂಠಿತವಾಗುತ್ತದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಎಮ್.ಎಸ್. ಸಿಂಧೂರ್ ಹೇಳಿದರು.

ಭಾಷಾವಾರು ಪ್ರಾಂತ್ಯ ರಚನೆಯಿಂದ ಕರ್ನಾಟಕದ ಅನೇಕ ಪ್ರದೇಶಗಳು ಮಹಾರಾಷ್ಟçದ ಪಾಲಾಗಿವೆ. ಮಹಾರಾಷ್ಟçದ ಗಡಿಯಲ್ಲಿರುವ ಕನ್ನಡಿಗರಿಗೆ ತಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸುತ್ತದೆ. ನಮ್ಮಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕು. ಕನ್ನಡ ನಮ್ಮ ಮಾತೃ ಭಾಷೆ, ಹೃದಯ ಭಾಷೆ. ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಂತೆ, ಅದೇ ಇನ್ನೊಂದು ಭಾಷೆಯಲ್ಲಿ ಸಿಗುವುದಿಲ್ಲ ಎಂದು ಹಿರಿಯ ಕನ್ನಡ ಹೋರಾಟಗಾರ ಡಾ. ಆರ್ ಕೆ ಪಾಟೀಲ ಹೇಳಿದರು.

ಸಾನಿಧ್ಯ ವಹಿಸಿದ್ದ ನಾಗಣಸೂರಿನ ಶ್ರೀಕಂಠ ಶ್ರೀಗಳು ಮಾತನಾಡಿ, ಸಂಖದಲ್ಲಿ ೩ನೇ ಮಹಾರಾಷ್ಟç ಗಡಿನಾಡು ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇಲ್ಲಿಯ ಕನ್ನಡಿಗರಿಗೆ ಹರ್ಷ ತಂದಿದೆ. ಇಲ್ಲಿನ ಕನ್ನಡಿಗರ ಸ್ಥಿತಿ-ಗತಿಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡದು ಅವುಗಳನ್ನು ಎರಡು ಸರಕಾರದ ಗಮನಕ್ಕೆ ತಂದು ಕೊಡುವ ಕಾರ್ಯ ಮಾಡುವಂತಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಎರಡು ವರ್ಷದ ಕಾಲಾವಧಿಯಲ್ಲಿಯೇ ೩ನೇ ಮಹಾರಾಷ್ಟç ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಸಂಖದಲ್ಲಿ ಹಮ್ಮಿಕೊಂಡಿದ್ದು ಈ ಭಾಗದ ಕನ್ನಡಿರಿಗೆ ಸಾಹಿತ್ಯ, ಕಲೆ, ಸಂಸ್ಕೃತಿಯ ರಸದೌತಣ ದೊರಕಿದಂತಾಗಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪರಿಷತ್ತು ಹಲವಾರು ಕಾರ್ಯಕ್ರಮಗಳು ಆಯೋಜಿಸುವ ಯೋಜನೆ ಹೊಂದಿದೆ ಎಂದುರು.

ಬೆಳಿಗ್ಗೆ ೮.೩೦ ಗಂಟೆಗೆ ತಹಸೀಲ್ದಾರ ಎಸ್. ಆರ್. ಮಾಗಡೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವ ನಾಯಕ ಕಿರಣ ಪಾಟೀಲ ಮಹಾದ್ವಾರ ಉದ್ಘಾಟಿಸಿದರು. ವಿಜಯಕುಮಾರ ಬಿರಾದಾರ ಶರಣೆ ದಾನಮ್ಮ ದಾಸೋಹ ಮನೆ ಉದ್ಘಾಟಿಸಿದರು. ಸಂಖ ವಿರಕ್ತಮಠದ ಪೂಜ್ಯ ಮಹೇಶ ದೇವರ ಸಾನಿಧ್ಯದಲ್ಲಿ ಬೆಳಿಗ್ಗೆ ೯.೦೦ ಗಂಟೆಗೆ ಶ್ರೀ ಮಹಾತ್ಮಾ ಬಸವೇಶ್ವರ ವೃತ್ತದಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಿತು. ಮಾಜಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಡಿ. ರಾಠೋಡ (ಲಮಾಣ) ಅವರು ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.

ಸಮ್ಮೇಳನದಲ್ಲಿ ತಜ್ಞರಿಂದ ‘ಕನ್ನಡ ಮತ್ತು ಮರಾಠಿ ಸಾಹಿತ್ಯ, ಸಂಸ್ಕೃತಿ : ಸಾಮರಸ್ಯ, ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಮಹಾಕನ್ನಡಿಗರ ಸ್ಥಿತಿ-ಗತಿ, ‘ಸಾಹಿತ್ಯದ ಬದುಕಿಗೆ ಮಾಧ್ಯಮದ ಬೆಳಕು, ಮಹಿಳಾ ಸಬಲೀಕರಣ ಕುರಿತಾದ ಗೋಷ್ಠಿಗಳು, ಕವಿಗೋಷ್ಠಿ, ಸಾಧಕರಿಗೆ ಗೌರವ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನರಂಜಿಸಿದವು. ಎರಡು ದಿನಗಳ ಕಾಲ ಗಡಿ ಕನ್ನಡಿಗರಿಗೆ ಸಾಹಿತ್ಯದ ರಸದೌತಣವೇ ದೊರಕಿತು.

ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು: ಸಾಂಗಲಿ ಜಿಲ್ಲಾ ಪಂ. ಮಾಜಿ ಸಭಾಪತಿ ತಮ್ಮಣಗೌಡ ರವಿ ಪಾಟೀಲ, ಯುವ ನಾಯಕ ಸಂಜೀವಕುಮಾರ ತೇಲಿ, ಸಾಂಗಲಿ ಜಿಲ್ಲಾ ಪಂ. ಮಾಜಿ ಸದಸ್ಯ ಅಪ್ಪಾಸಾಹೇಬ ನಾಮದ, ಬಿಜೆಪಿ ತಾಲೂಕಾಧ್ಯಕ್ಷ ಪ್ರಮೋದ ಸಾವಂತ, ಮಾಜಿ ಬಿಜೆಪಿ ತಾಲೂಕಾಧ್ಯಕ್ಷ ಸುನೀಲ ಪವಾರ, ಪ್ರಾಂಶುಪಾಲರಾದ ಕವಿತಾ ಪಾಟೀಲ ಹಾಗೂ ಮುಚ್ಚಂಡಿಯ ರಮೆಶ ಪಾಟೀಲ, ತಮ್ಮಣ್ಣ ಬಾಗೇಳಿ, ಸಾಂಗಲಿ ಜಿಲ್ಲಾ ಪಂ. ಮಾಜಿ ಅಧ್ಯಕ್ಷ ಅಣ್ಣಾಸಾಹೇಬ ಗಡದೆ, ಸುನೀಲ ಪೋತದಾರ, ಸಿದ್ಧಣ್ಣಗೌಡ ಪಾಟೀಲ ಸೇರಿದಂತೆ ಹಲವಾರು ಕನ್ನಡಿಗರು ಇದ್ದರು.

ಸಮಾರಂಭದಲ್ಲಿ ಪಾಲ್ಗೊಂಡ ಸಾಹಿತಿಗಳು: ಸಾಹಿತಿ-ಚಿಂತಕರಾದ ಡಾ. ಶಶಿಕಾಂತ ಪಟ್ಟಣ, ಡಾ. ಬಿ. ಬಿಪೂಜಾರಿ, ಡಾ. ರಮೇಶ್ ಮುಲಗೆ, ಡಾ. ಗುರುಸಿದ್ಧಯ್ಯ ಸ್ವಾಮಿ, ಡಾ. ಕೆ. ಕೆ. ಪತ್ತಾರ, ವಿಜಯಪುರ ಜಿಲ್ಲಾ ಪತ್ರಕರ್ತರಾದ ಜಿ. ಎಸ್. ಕಮತರ, ವಿಜಯಪುರದ ಸಂಶೋಧಕಿ ಸೀಮಾ ತಕನ್ನವರ್, ಡಾ.ಗೀತಾ ಡಿಗ್ಗೆ, ಡಾ.ಶಿವಾನಂದ ಕುಬಸದ, ಶ್ರೀಮತಿ ಇಂದಿರಾ ಮೋಟೆಬೆನ್ನೂರ್, ಚೆನ್ನವೀರ ಭದ್ರೇಶ್ವರಮಠ, ಅ.ಬಾ.ಚಿಕ್ಕಮಣೂರ, ಡಾ.ಪ್ರೀಯಂವದಾ ಹುಲಗಬಾಳಿ, ಎನ್.ಆರ್.ಕುಲಕರ್ಣಿ, ಚಂದ್ರಶೇಖರ ಕಾರಕಲ್ ಸೇರಿದಂತೆ ಹಲವಾರು ಸಾಹಿತಿಗಳು ಇದ್ದರು.

ಡಾ. ಶಶಿಕಾಂತ ಪಟ್ಟಣ ಅವರು ರಚಿಸಿದ ‘ಬೇಲಿ ಮೇಲಿನ ಹೂವು’ ಕವನ ಸಂಕಲನ ಕೃತಿಯನ್ನು ಮಾಜಿ ಸಚಿವೆ ಡಾ. ಲೀಲಾದೇವಿ ಪ್ರಸಾದ್ ಅವರು ಲೋಕಾರ್ಪಣೆಗೊಳಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಮಧುಮಾಲ ಲಿಗಾಡೆ ಅವರು ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.

ಸಮ್ಮೇಳನ ಯಶಸ್ವಿಯಾಗಿ ಕಸಾಪ ಮಹಾರಾಷ್ಟ್ರ ಘಟಕದ ಗೌರವ ಕಾರ್ಯದರ್ಶಿ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಶರಣು ಕೋಳಿ, ದಿನೇಶ್ ಚವ್ಹಾಣ್,  ಪ್ರಕಾಶ್ ಪ್ರಧಾನ, ಹಾಗೂ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ, ಉಪಾಧ್ಯಕ್ಷ ಬಸವರಾಜ ಧನಶೆಟ್ಟಿ, ವಿದ್ಯಾಧರ ಗುರವ, ಉಮೇಶ ಕೋಳಿ, ಪ್ರಶಾಂತ ವಗ್ಗೋಲಿ ಸೇರಿದಂತೆ ಮೊದಲಾದವರು ಶ್ರಮಿಸಿದರು. ಸಮ್ಮೆಳನದ ಬಹಿರಂಗ ಸಭೆಯಲ್ಲಿ ಪರಿಷತ್ತಿನ ಕಾರ್ಯದರ್ಶಿ ಶರಣಪ್ಪ ಫುಲಾರಿ ಗೊತ್ತುವಳಿಗಳನ್ನು ಮಂಡಿಸಿದರು. ಅರವಿಂದ ಕರಡಿ ನಿರೂಪಿಸಿದರು. ಗುರುಬಸು ವಗ್ಗೋಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here