ಸುರಪುರ: ಕಳೆದ ಎರಡಿ ದಿನಗಳ ಹಿಂದೆ ಕೊಡೇಕಲ್ ಗ್ರಾಮದಲ್ಲಿ ನಡೆದ ಗಲಾಟೆ ಪ್ರಕರಣದ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಹಾಲುಮತ ಸಮಾಜದ ಯುವ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕೊಡೇಕಲ್ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಶಾಸಕ ರಾಜುಗೌಡ ಅವರ ಮೇಲೆ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ,ಘಟನೆ ನಡೆದಾಗ ಶಾಸಕ ರಾಜುಗೌಡ ಅವರಾಗಲಿ,ಅವರ ಸಹೋದರ ಹಣಮಂತ ನಾಯಕ ಬಬ್ಲುಗೌಡ ಅವರಾಗಲಿ ಕೊಡೇಕಲ್‍ನಲ್ಲಿ ಇರಲಿಲ್ಲ ಎಂದರು.
ಅಲ್ಲದೆ ಕಾಂಗ್ರೆಸ್ ಮುಖಂಡರೆ ಉದ್ದೇಶಪೂರ್ವಕವಾಗಿ ಗಲಾಟೆಯನ್ನು ಮಾಡಿಸಿದ್ದಾರೆ.ಯಾಕೆಂದರೆ ಗಲಾಟೆ ನಡೆದ ದಿನ ಗ್ರಾಮದಲ್ಲಿ ಜಾತ್ರೆ ಇದೆ,ಅಲ್ಲದೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ,ಅಲ್ಲದೆ ಚುನಾವಣಾ ಅಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನಾಗಲಿ,ಅನುಮತಿಯನ್ನಾಗಲಿ ಪಡೆದಿರಲಿಲ್ಲ,ಆದರೆ ಉದ್ದೇಶಪೂರ್ವಕವಾಗಿ ಗಲಾಟೆಯನ್ನು ಮಾಡಿಸಿದ್ದು,ಅದಕ್ಕೆ ಮುಖಂಡರು ಮಾತನಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದರು.
ಗಲಾಟೆಯಲ್ಲಿ ಹಾಲುಮತ ಸಮುದಾಯದ ರವಿಚಂದ್ರ ಸಾಹುಕಾರ ಎನ್ನುವವರಿಗೆ ಗಾಯವಾಗಿದೆ,ಅದನ್ನು ರಾಜುಗೌಡ ಅವರು ಕುರುಬ ಸಮುದಾಯದವರ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಬಿಂಬಿಸುವ ಕೆಲಸವನ್ನು ಮಾಡಲು ಮುಂದಾಗಿದ್ದಾರೆ.ಆದರೆ ಅಂದು ನಡೆದ ಗಲಾಟೆಯಲ್ಲಿ ಕೇವಲ ಹಾಲುಮತ ಸಮಾಜದವರು ಮಾತ್ರವಲ್ಲದೆ ಇತರೆ ಸಮಾಜದವರಿಗೆ ಗಾಯಗಳಾಗಿವೆ ಇದನ್ನು ಹೇಳದೆ ಕೇವಲ ಹಾಲುಮತ ಸಮಾಜದವರ ಕುರಿತು ಹೇಳುತ್ತಾ ಒಂದು ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ ಶಾಸಕ ರಾಜುಗೌಡ ಅವರು ಹಾಲುಮತ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯ,ಸಾಮಾಜಿಕ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ನೀಡಿದ್ದಾರೆ.ಇದನ್ನು ಸಹಿಸದೆ ಉದ್ದೇಶಪೂರ್ವಕವಾಗಿ ಆರೋಪಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿ,ಕ್ಷೇತ್ರದಲ್ಲಿನ ಎಲ್ಲಾ ಹಾಲುಮತ ಸಮಾಜ ಶಾಸಕ ರಾಜುಗೌಡ ಅವರನ್ನು ಬೆಂಬಲಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲು ದಂಡಿನ್,ವಿಜಯಕುಮಾರ ಮಂಗಿಹಾಳ,ರಂಗನಗೌಡ ಪಾಟೀಲ್ ದೇವಿಕೇರ,ಅಯ್ಯಪ್ಪ ಶಾಂತಪೂರ,ಮಲ್ಲನಗೌಡ ದೇವಿಕೇರ,ಆದಪ್ಪ ಜಂಬಲದಿನ್ನಿ,ಬಸವರಾಜ ಕಂಬಳಿ,ನಿಂಗು ಐಕೂರ,ವೆಂಕಿ ಕೊಳ್ಳಿ ಸೇರಿದಂತೆ ಇತರರಿದ್ದರು.