ಶಹಾಬಾದ: ಪ್ರಸ್ತುತವಾಗಿ ವಿಧಾನಸಭೆಚುನಾವಣೆ ಆಗಮಿಸಿರುವುದರಿಂದ ಸಾರ್ವಜನಿಕರಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವಲ್ಲಿ ಮಕ್ಕಳ ಶ್ರಮದಾನ ಸಾರ್ಥಕಗೊಳಿಸಲು ಸರ್ವರು ಮತದಾನ ಮಾಡಬೇಕು ಎಂದು ಸೇಠ ಗೋವರ್ಧನಲಾಲ ವರ್ಮಾ ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಹೇಳಿದರು.
ಅವರು ಶನಿವಾರ ಸೇಠ ಗೋವರ್ಧನಲಾಲ ವರ್ಮಾ ಹಿಂದಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಎಸ್.ಎಸ್.ನಂದಿ ಪ್ರೌಢಶಾಲಾ ಮಕ್ಕಳಿಂದ ನಡೆದ ಮತದಾನ ಜಾಗೃತಿ ಜಾಥಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಮತದಾನ ನಮ್ಮ ಹಕ್ಕು, ಪವಿತ್ರ ಮತದಾನ ನಮ್ಮ ಧ್ಯೇಯವಾಗಬೇಕು. ಅದಕ್ಕೆ ಬೆಲೆ ಕಟ್ಟಬಾರದು. ಅದನ್ನು ಚಲಾಯಿಸುವ ಮೂಲಕ ನಮ್ಮತನವನ್ನು ಕಾಪಾಡಿಕೊಳ್ಳಬೇಕು. ಒಂದು ಉತ್ತಮ ಮತ ಕ್ಷೇತ್ರದ ಅಭಿವೃದ್ಧಿಗೆ ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಹೇಳಿದರು.
ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಹಾಗೂ ಚನ್ನಬಸಪ್ಪ ಕೊಲ್ಲೂರ್ ಮಾತನಾಡಿ, ಪ್ರತಿಯೊಬ್ಬ ಮತದಾರರು ಯಾವುದೇ ಹಣ ಹಾಗೂ ಇತರೆ ಆಮಿಷಕ್ಕೆ ಒಳಗಾಗದೆ ಮುಕ್ತವಾಗಿ ಧೈರ್ಯದಿಂದ ಮತಚಲಾಯಿಸಿ. ದೇಶದ ಅಭಿವೃದ್ಧಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ಜನನಾಯಕರ ಆಯ್ಕೆ ಮಾಡುವಂತೆ ಈ ಬಾರಿ ಶೇ 100ರಷ್ಟು ಮತಚಲಾಯಿಸಿ ಪ್ರಜಾಪ್ರಭುತ್ವದ ಘನತೆ ಎತ್ತಿಹಿಡಿಯುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ಬಾರಿ ಚುನಾವಣಾ ಆಯೋಗ ನಿರ್ಧರಿಸಿದಂತೆ 80ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ವಿಶೇಷಚೇತನರಿಗೆ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗದೇ ಇದ್ದಲ್ಲಿ ಅಂತವರು ಚುನಾವಣೆ ಅಧಿಕಾರಿಗಳಿಗೆ ಮನವಿ ನೀಡಿದರೆ ಮನೆಗೆ ಬಂದು ಮತ ಚಲಾವಣೆ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಶಾಲಾ ಮಕ್ಕಳು ಹಾಗೂ ಶಿಕ್ಷಕರ ನೇತೃತ್ವದಲ್ಲಿ ರೇಲ್ವೆ ನಿಲ್ದಾಣ, ಅಂಬೇಡ್ಕರ್ ವೃತ್ತ, ನೆಹರು ವೃತ್ತ, ತ್ರಿಶೂಲ ವೃತ್ತ, ಮಜ್ಜಿದ್ ವೃತ್ತ ಹಾಗೂ ಇತರೆ ಪ್ರದೇಶಗಳಲ್ಲಿ ಸಂಚರಿಸಿದ ಮತದಾನ ಕುರಿತು ನಾನಾ ಘೋಷ್ಯವಾಕ್ಯಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಶಿಕ್ಷಕರಾದ ಸಂಗೀತಾ ಜಾಧವ, ಮಹೇಶ್ವರಿ ಗುಳಿಗಿ, ಲತಾ, ವಿಜಯಲಕ್ಷ್ಮಿ,ರಾಜೇಶ್ವರಿ, ಸಂಗೀತಾ ದೇಶಪಾಂಡೆ, ನೈನಾ ಚಪ್ಪಳಗಾಂವಕರ್,ಉಷಾ ನಂದವಾರ್, ಮಂಜು ಮಾನೆ,ಸುಮಿತ್ರ ದಂಡಗುಲಕರ್,ಸ್ನೇಹಾ ಹಿಬಾರೆ,ಶ್ರೀರಾಮ ಇತರರು ಇದ್ದರು.
ಜಾಥಾ: ನಗರದ ಬಿ.ವಿ.ಎಮ್, ಕೂಡಲಸಂಗಮ, ಸರಕಾರಿ ಬಾಲಕರ ಪ್ರೌಢಶಾಲೆ, ಶಿವಯೋಗಿಸ್ವಾಮಿ, ಮಿನಿರೋಸ್ ಸೇರಿದಂತೆ ಇತರ ಶಾಲಾಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಯಿತು.