ಬಸವ ಜಯಂತಿ ವೈಜ್ಞಾನಿಕ ಜಯಂತಿ ಆಚರಣೆಯಾಗಲಿ

0
17

ಕಲಬುರಗಿ: ಬಸವ ಜಯಂತಿ ಆಚರಣೆ ಜಯಂತಿ ಅಲ್ಲ. ಅದು ವಿಚಾರ, ವಿಷಯ, ವೈಜ್ಞಾನಿಕ, ವೈಚಾರಿಕ ಜಯಂತಿ ಎಂದು ಮೈಸೂರಿನ ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟದ ವತಿಯಿಂದ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಿದ್ದ 890ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಬಸವ ಜಯಂತಿಯನ್ನು ಯಾಕೆ? ಯಾರು? ಹೇಗೆ ಆಚರಿಸಬೇಕು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದರು.

Contact Your\'s Advertisement; 9902492681

ಸಾಮಾಜಿಕ ಸಮಾನತೆಯನ್ನು ತಂದು ಕೊಟ್ಟ ಬಸವಣ್ಣನವರು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಬಹುದು. ಜಾತಿಯನ್ನು ಜೀವಂತವಾಗಿಟ್ಟು ಬಸವ ಜಯಂತಿ ಆಚರಿಸಿದರೆ ಬಸವಣ್ಣನವರಿಗೆ ಮಾಡುವ ಅಪಮಾನ ಎಂದು ಖೇದ ವ್ಯಕ್ತಪಡಿಸಿದರು.

ಗರ್ಭಗುಡಿ ಸಂಸ್ಕೃತಿ ಬಿಟ್ಟು ದೇಹವೇ ದೇಗುಲ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಧರ್ಮಕ್ಕಾಗಿ ಮನುಷ್ಯರನ್ನು ಕೊಲ್ಲುವುದು ಯಾವ ಧರ್ಮ? ಎಂದು ಪ್ರಶ್ನಿಸಿದ ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಧರ್ಮವನ್ನು ಸರಳೀಕರಿಸಿ ಜನ ಸಾಮಾನ್ಯರ ಕೈಗಿತ್ತರು ಎಂದು ತಿಳಿಸಿದರು.

ಬಸವಣ್ಣನವರು ಕೊಟ್ಟ ಇಷ್ಟಲಿಂಗ ಕನ್ನಡಿ ಇದ್ದ ಹಾಗೆ. ಪರಶಿವನ ಘನತೇಜ. ದೇವರ ನಿಜಸ್ವರೂಪ. ತನ್ನನ್ನು ತಾನು ಅರಿಯುವುದು. ಮೂಢನಂಬಿಕೆ, ಕಂದಾಚಾರ ವಿರೋಧಿಸಿದ ಶರಣರು ಮಹಿಳೆಯರಿಗೆ ಸಮಾನ ಅವಕಾಶ, ಮುಕ್ತ ಸ್ವಾತಂತ್ರ್ಯ ಒದಗಿಸಿದ್ದರು ಎಂದು ವಿವರಿಸಿದರು.

ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಬಸವರಾಜ ಗಾದಗೆ ಕಾರ್ಯಕ್ರಮ ಉದ್ಘಾಟಿಸಿದರು.

ರಾವೂರ ಸಿದ್ಧಲಿಂಗೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.‌ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.

ಎಂ.ಕೆ. ಪಾಟೀಲ ಕೆಲ್ಲೂರ, ಹುಲಿಕಂಠರಾಯ ಎಸ್.ಎಂ., ರಾಜು ನವಲದೆ, ಮಹಾಂತಪ್ಪ ಸಂಗಾವಿ, ಶೇಖರ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ವೇಳೆಯಲ್ಲಿ ಡಾ. ಕಿರಣ ಚೌಕಾ, ಉಮೇಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಡಾ. ಬಸವರಾಜ ಭಾವಿ ಸ್ವಾಗತಿಸಿದರು. ರವಿ ಸಜ್ಜನ್ ನಿರೂಪಿಸಿದರು. ಆದ್ಯಾ ಹಿಪ್ಪರಗಿ ವಚನ ನೃತ್ಯ ಮಾಡಿದರು. ಶರಣಬಸಪ್ಪ ನಾಗೂರ ಶರಣು ಸಮರ್ಪಣೆಗೈದರು.

ಬಸವಣ್ಣ ಮೆರವಣಿಗೆಯಲ್ಲಿ ಇಲ್ಲ. ಬರವಣಿಗೆಯಲ್ಲಿ ಇದ್ದಾರೆ. ಬಸವ ಸಂಸ್ಕೃತಿ ಋಷಿ ಸಂಸ್ಕೃತಿ ಅಲ್ಲ. ಕೃಷಿ ಸಂಸ್ಕೃತಿ. ‌ಜಾತಿಮುಕ್ತ, ಮೌಢ್ಯಮುಕ್ತ, ಹಸಿವುಮುಕ್ತ ಭಾರತವನ್ನು 12ನೇ ಶತಮಾನದಲ್ಲಿ ಕಟ್ಟಿದ್ದರು. – ಜ್ಞಾನ ಪ್ರಕಾಶ ಸ್ವಾಮೀಜಿ, ಮೈಸೂರು
ಬಸವಣ್ಣನ ಹೆಸರನ್ನು ಪುಂಕಾನುಪುಂಕವಾಗಿ ಮಾತನಾಡುವ ರಾಜಕಾರಣಿಗಳು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಡ್ಡಗಾಲು ಹಾಕಿದರು.ಬಸವಣ್ಣ ವಿಶ್ವಗುರು. ಆದರೆ ಬಸವಣ್ಣ ನಮ್ಮ ಶಿಷ್ಯ ಎಂದು ಹೇಳಿಕೊಂಡು ಹೋಗುವ ಕೆಲವರಿಗೆ ಯಾವ ನೈತಿಕತೆ ಇದೆ?.-ಬಾಬುರಾವ ಯಡ್ರಾಮಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here