ಕಲಬುರಗಿ: ಜಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದರು. ಹಾಗೆ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಬಂದು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಪರ ಪ್ರಚಾರ ಕೈಗೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಬೆಳಗೇರಾ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮಣಿಕಂಠನ ಹಿನ್ನೆಲೆ ಗಮನಿಸಿ ಬಿಜೆಪಿ ಪಕ್ಷದಲ್ಲಿದ್ದ ಅರವಿಂದ ಚವ್ಹಾಣ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರು ಸ್ವಾಭಿಮಾನಿಗಳು ಮಣಿಕಂಠನಿಗೆ ಬಿಜೆಪಿ ಟಿಕೇಟು ನೀಡಿದ್ದಕ್ಕೆ ನೋವಾಗಿತ್ತು. ಬಿಜೆಪಿಯಲ್ಲಿ ಇದ್ದವರೇ ಅವನನ್ನು ಒಪ್ಪಿಲ್ಲ ಎಂದಮೇಲೆ ಚಿತ್ತಾಪುರದ ಜನರು ಏಕೆ ಒಪ್ಪಬೇಕು? ಎಂದು ಪ್ರಶ್ನಿಸಿದರು.
ಚಿತ್ತಾಪುರದ ಭವಿಷ್ಯ ಉಜ್ವಲವಾಗಬೇಕಿದ್ದರೆ ಅಕ್ಕಿ ಹಾಗೂ ಹಾಲಿನಪುಡಿ ಕದ್ದು ಸಾಗಾಣಿಕೆ ಮಾಡುವ ವ್ಯಕ್ತಿಯನ್ನು ತಿರಸ್ಕರಿಸಿ ಅಭಿವೃದ್ದಿಪರ ಚಿಂತನೆಯುಳ್ಳ ತಮ್ಮನ್ನು ಆರಿಸಿ ಕಳಿಸುವ ಮೂಲಕ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೋರು ರಾಠೋಡ ತಾವು ಮೊದಲು ಬಿಜೆಪಿಯಲ್ಲಿದ್ದು ಪಕ್ಷ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಸೂಟ್ ಕೇಸ್ ಪಕ್ಷ ಆಗಿದ್ದರಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ಅವರು ಹೇಳಿದರು.
ನಾಗರೆಡ್ಡಿ ಪಾಟೀಲ, ಭೀಮಣ್ಣ ಸಾಲಿ ಸೇರಿದಂತೆ ಹಲವರಿದ್ದರು.