ಆಪರೇಷನ್ ಕಮಲ ನಡೆಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಗೆ ರಾಜ್ಯದ ಅಭಿವೃದ್ದಿ ಬೇಕಾಗಿಲ್ಲ: ಪ್ರಿಯಾಂಕ್ ಖರ್ಗೆ ಟೀಕೆ

0
306

ಚಿತ್ತಾಪುರ: ಸಂವಿಧಾನ ಬದ್ದವಾಗಿ ಅಸ್ಥಿತ್ವಕ್ಕೆ ಬಂದಿದ್ದ ಸಮ್ಮಿಶ್ರ ಸರಕಾರವನ್ನು ಕೆಡವಿ ವಾಮ ಮಾರ್ಗದ ಮೂಲಕ ಹಾಗೂ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಸಂವಿಧಾನ ವಿರೋಧಿ ಧೋರಣೆ ಎಂದು ಶಾಸಕ ಶ್ರೀ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ತಾಲ್ಲೂಕಿನ ಹೊನಗುಂಟಿ ಗ್ರಾಮದಲ್ಲಿ 4.21 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಇದರಲ್ಲಿ ಅಂಬಿಗರ ಚೌಡಯ್ಯ ಭವನ, ಪ್ರಾಥಮಿಕ ಶಾಲೆಗೆ ನಾಲ್ಕುಕೋಣೆಗಳು, ಸಿಸಿ ರಸ್ತೆ ಹಾಗೂ ಚರಂಡಿ ಲಕ್ಷ ಹಾಗೂ ನೀರು ಸರಬರಾಜು ಯೋಜನೆ ಸೇರಿವೆ ಜನರು ಯೋಜನೆಗಳ ಸದ್ಭಳಕೆ ಮಾಡಿಕೊಂಡು ಜನಪರ ಕೆಲಸ ಮಾಡಲು ಶಕ್ತಿ ತುಂಬಬೇಕು ಎಂದು ಕರೆ‌ ನೀಡಿದರು.

Contact Your\'s Advertisement; 9902492681

ಬಿಜೆಪಿ ಅಭಿವೃದ್ದಿ ವಿರೋಧಿಯಾಗಿದ್ದು ಕೇವಲ ಅಧಿಕಾರದ ಆಸೆಗಾಗಿ ಹಣ‌ಕೊಟ್ಟು ೧೭ ಜನ ಶಾಸಕರನ್ನು ಖರೀದಿ ಮಾಡಿ ಅಧಿಕಾರಕ್ಕೆ ಬಂದರೂ ಕೂಡಾ ಜನರು ಸುಮ್ಮನಿದ್ದು ಸ್ವಾಗತಿಸುತ್ತಿರುವುದು ಅಪಾಯಕಾರಿ ಎಂದರು. ಕಾಂಗ್ರೇಸ್ ಬಿಟ್ಟು ಉಮೇಶ್ ಜಾಧವ್ ಬಿಜೆಪಿ ಸೇರಿದಾಗಲೂ ಇಂತದ್ದೆ ಅಪಾದನೆ ಎದುರಿಸಿದ್ದರು. ಈಗ ಗೆದ್ದು ಬಂದಿದ್ದಾರೆ ನೋಡೋಣ ಒಳ್ಳೆಯ ಕೆಲಸ ಮಾಡಿದರೆ ಬೆನ್ನು ತಟ್ಟುತ್ತೇವೆ ಒಳ್ಳೆಯ ಕೆಲಸ ಮಾಡದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಏಕವ್ಯಕ್ತಿಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಕೇಂದ್ರ ಸಚಿವರು ಟೂರ್‌ಗೆ ಬಂದ ಹಾಗೆ ಬಂದು ನೆರೆ‌ ಪ್ರದೇಶಕ್ಕೆ ಬಂದು ಹೋಗಿದ್ದಾರೆ. ತಮ್ಮ ಮಂತ್ರಿ ಪರಿಷತ್ ನಿಂದ ರಾಷ್ಟ್ರಧ್ವಜ ಹಾರಿಸಲು ದೇಶಪ್ರೇಮಿ ಬಿಜೆಪಿ ಪಕ್ಷದ ಆಡಳಿತದ ರಾಜ್ಯ ಸರಕಾರ ವಿಫಲವಾಗಿ ಪವರ್ ಆಪ್ ಅಟಾರ್ನಿ ಮೂಲಕ ಯಾರಿಂದಲೋ ಸ್ವಾತಂತ್ರ್ಯ ದಿನಾಚರಣೆ ನಡೆಸಿದ್ದು ನಾಚಿಕೆಗೇಡು ಎಂದು ಹರಿಹಾಯ್ದರು. ವಿಠ್ಠಲ್ ಹೇರೂರು ಅವರ ನಂತರದ ಸ್ಥಾನ ಯಾರು ತುಂಬುತ್ತಾರೆ ಎನ್ನುವ ಕೊರಗು ಕೋಲಿ ಕಬ್ಬಲಿಗ ಸಮಾಜಕ್ಕೆ ಇತ್ತು ಆದರೆ ಈಗ ಆ ಕೊರಗು ನೀಗಿದೆ‌, ತಿಪ್ಪಣ್ಣಪ್ಪ ಕಮಕನೂರು ಹಾಗೂ ಭೀಮಣ್ಣ ಸಾಲಿ ಎರಡು ಅವರ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿ ಸಮಾಜದ ಮುಖಂಡರು ಹಾಗೂ ಜನರು ಅವರೊಟ್ಟಿಗೆ ಇರಬೇಕು ಎಂದು ಕಿವಿ ಮಾತು ಹೇಳಿದರು.

ತಮ್ಮ ಹುಟ್ಟು ಹಬ್ಬದ ದಿನದಂದು ಗ್ರಾಮದ 36 ಯುವಕರು ರಕ್ತದಾನ ಮಾಡಿದ ವಿಷಯ ತಿಳಿದು ಬೇಸರ ವ್ಯಕ್ತಪಡಿಸಿದ ಪ್ರಿಯಾಂಕ್ ಅವರು ಈ ರೀತಿ ಮಾಡಬೇಡಿ ಅದು ನನ್ನ ಹೆಸರಲ್ಲಿ ಬೇಡ. ನಾನು ಅಷ್ಟೊಂದು ದೊಡ್ಡ ವ್ಯಕ್ತಿಯಲ್ಲ ಕೇವಲ ಸಾಧಾರಣ ವ್ಯಕ್ತಿ ನಿಮ್ಮೆಲ್ಲರ ಪ್ರತಿನಿಧಿಯಾಗಿದ್ದೇನೆ ಅಷ್ಟೆ. ಅಷ್ಟಕ್ಕೂ ರಕ್ತದಾನ ಮಾಡಬೇಕಾದರೆ, ಬಸವ, ಚೌಡಯ್ಯ ಅಥವಾ ಅಂಬೇಡ್ಕರ ಜಯಂತಿಯಂದು ರಕ್ತದಾನ ಮಾಡಿ ಅವರಿಗೆ ಗೌರವ ಸಲ್ಲಿಸಿ ಎಂದು ಕರೆ ನೀಡಿದರು.

ರಾಜಕಾರಣಿಗಳನ್ನು ದೇವರಂತೆ ನೋಡಲಾಗುತ್ತಿದೆ‌ ಇದರಿಂದಾಗಿ ನಾವೆಲ್ಲ ಜನರಿಂದ ಮೇಲೆ ಇದ್ದೇವೆ ಎನ್ನುವ ಭಾವನೆ ಬರುತ್ತಿದೆ. ನಾನು ಈ ಊರಿಗೆ ಬರುವಾಗ ದಾರಿಯಲ್ಲಿ ಮಹಿಳೆಯರು ಕಾಲಿಗೆ ನೀರು ಹಾಕಲು ಬಂದರು. ತೀವ್ರ ಬರವಿರುವಾಗ ನನ್ನ ಕಾಲಿಗೆ ನೀರು ಹಾಕುವುದು ಎಷ್ಟು ಸರಿ? ಇಂತಹುದನ್ನು ನಾನು ವೈಯಕ್ತಿಕವಾಗಿ ಇಷ್ಟಪಡುವುದಿಲ್ಲ. ನೀವು ನಮ್ಮನ್ನು ಈ ರೀತಿ ಸ್ವಾಗತಿಸುವುದು ಬೇಡ. ಇಂತಹ ಆಚಾರಗಳನ್ನು ಈ ಕೂಡಲೇ ನಿಲ್ಲಿಸಿ ನಮ್ಮಿಂದ ಅಭಿವೃದ್ದಿ ಕೆಲಸ ಮಾಡಿಸಿಕೊಳ್ಳಿ ನೀವು ಆರಿಸಿ ಕಳಿಸಿದ್ದಕ್ಕೆ ನಾವು ಮಾಡುವ ಕರ್ತವ್ಯ ಅದು ಅದಕ್ಕೇಕೆ ನೀವು ಧನ್ಯತಾಭಾವ ವ್ಯಕ್ತಪಡಿಸಬೇಕು? ಇಂತಹ ವ್ಯವಸ್ಥೆಯನ್ನು ಆಗಿನ ಕಾಲದಲ್ಲೇ ಬಾಬಾಸಾಹೇಬರು ವಿರೋಧಿಸಿದ್ದರು ಎಂದು ಮಾರ್ಮಿಕವಾಗಿ ನುಡಿದರು.

ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ್ ಮಾತನಾಡಿ, ಚಿತ್ತಾಪುರ ಕ್ಷೇತ್ರದ ಜನರು ಒಳ್ಳೆಯ ವ್ಯಕ್ತಿಯನ್ನು ಗುರುತಿಸಿ ಆರಿಸಿ ಕಳಿಸಿದ್ದಾರೆ ಹಾಗಾಗಿ ಈ ಗ್ರಾಮದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಇದಕ್ಕೆಲ್ಲಾ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಪ್ರತಿಪಾದಿಸಿದರು. ಇತ್ತೀಚಿಗೆ ಗೆದ್ದುಬಂದ ಎಂಪಿ ಉಮೇಶ್ ಜಾಧವ್ ಅವರು ಜನರು ತಮಗೆ ಮತ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಹಳ್ಳಿಗಳಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ ಹಾಗೆ ಮಾಡುತ್ತಲೇ ಹೋದರೆ ಐದು ವರ್ಷ ಕಾಲ ಹಾಗೆ ಕಳೆದುಹೋಗುತ್ತದೆ. ಅದರ ಬದಲು ಅಭಿವೃದ್ದಿ ಕೆಲಸಗಳ ಮೂಲಕ ಜನರನ್ನು ತಲುಪಬೇಕು ಎಂದು ಹೇಳಿದರು.

ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ವಿಠ್ಠಲ್ ಹೇರೂರು ಅವರ ಆಸೆಯಂತೆ ತಮ್ಮನ್ನು ಖರ್ಗೆಯವರು ತಮ್ಮನ್ನು ಎಂ ಎಲ್ ಸಿ ಯನ್ನಾಗಿ ಮಾಡಿದ್ದಾರೆ ಎಂದರು. ಅಭಿವೃದ್ದಿ ಕಾಮಗಾರಿಗಳಿಗೆ ಖರ್ಗೆಯವರು ಒತ್ತು ನೀಡಿದ ಉದಾಹರಣೆ ಸಮೇತ ವಿವರಿಸಿದ ಕಮಕನೂರು, ಕ್ಷೇತ್ರದ ಮಠ ಮಾನ್ಯಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಕ್ಷೇತ್ರಗಳ ಅಭಿವೃದ್ದಿ ಮಾಡಲು ಸಹಕಾರ‌ ನೀಡಿದ್ದಾರೆ. ಸಮ್ಮಿಶ್ರ ಸರಕಾರದಿಂದ ರೂ 800 ಕೋಟಿ ಅನುದಾನ ಕ್ಷೇತ್ರಕ್ಕಾಗಿ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದರು. ಬುದ್ದ, ಬಸವ, ಅಂಬೇಡ್ಕರ ಹಾಗೂ ಅಂಬಿಗರ ಚೌಡಯ್ಯನವರ ಸಿದ್ದಾಂತಗಳನ್ನು ಮೈಗೂಡಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ, ಬಸವಣ್ಣನವರ ಜಾತಿರಹಿತ ಸಮಾಜ ನಿರ್ಮಾಣದ ಕನಸು ನನಸು ಮಾಡುತ್ತಾ ಅಂಬೇಡ್ಕರ ಅವರ ಸಂವಿಧಾನದ ಮೂಲಕ ಎಲ್ಲ ವರ್ಗದವರಿಗೆ ಸಮಾಜಿಕ ನ್ಯಾಯ ಒದಗಿಸಿದ್ದಾರೆ. ಕೋಲಿ ಕಬ್ಬಲಿಗ ಸಮಾಜದ ಅಭಿವೃದ್ದಿಗೆ ಅವರು ಕೈಗೊಂಡ ಕ್ರಮಗಳಿಂದಾಗಿ ಪ್ರಿಯಾಂಕ್ ಅವರು ನಮ್ಮ ಸಮುದಾಯದ ಎರಡನೆಯ ವಿಠ್ಢಲ್ ಹೇರೂರು ಇದ್ದಂತೆ ಎಂದು ಗುಣಗಾನ ಮಾಡಿದರು.

ವೇದಿಕೆಯ ಮೇಲೆ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ್, ರಮೇಶ ಮರಗೋಳ, ಜಿಪಂ ಮಾಜಿ ಅಧ್ಯಕ್ಷ, ಭೀಮನಗೌಡ ಪಾಟೀಲ್ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here