ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದಕ್ಕಾಗಿ ನಾಗರಿಕ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಎದ್ದೇಳು ಕರ್ನಾಟಕ ನಾಗರಿಕ ಅಭಿಯಾನ ಮೂರು ತಿಂಗಳಿಂದ ಆರಂಭವಾಗಿದೆ ಎಂದು ಸಾಮಾಜಿಕ ಪರಿಸರ ಚಳವಳಿಗಾರ ಸಿರಿಮನೆ ನಾಗರಾಜ ಹಾಗೂ ಪರಿಸರ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತೆ ತಾರಾರಾವ್ ತಿಳಿಸಿದರು.
ಕೋಮುವಾದದ ಮೂಲಕ ಸೌಹಾರ್ದ ಪರಂಪರೆ ಹಾಳು ಮಾಡಿದ ಬಿಜೆಪಿ ವಿರುದ್ಧ 103 ಮತಕ್ಷೇತ್ರಗಳಲ್ಲಿ ಆಬಿಯಾನ ನಡೆಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಒಳ ಮೀಸಲಾತಿ ಹೆಸರಿನ ಮಹಾ ಮೋಸ ಮತ್ತು ದ್ರೋಹ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ಮಿತಿ ಮೀರಿದ ಹಿಂಸೆ, ನರೇಗಾ ಉದ್ಯೋಗ ಕಡಿತ, ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿರುವುದನ್ನು ವಿರೋಧಿಸಿ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ರಾಜ್ಯದ ಹಲವು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಮತದಾರರಲ್ಲಿ ಜಾಗೃತಿ ಮತ್ತು ಜವಾಬ್ದಾರಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಹೊಸ ಸರ್ಕಾರ, ಹೊಸ ವಿಚಾರಗಳಿಗೆ ಬೆಂಬಲಿಸಬೇಕು ಎಂಬ ಹಿನ್ನೆಲೆಯಲ್ಲಿ ಶಿಕ್ಷಣ ಪದ್ಧತಿ ಸುಧಾರಣೆ, ಹಾಗೂ ಸಮಾಜದ ಉದ್ಧಾರಕ್ಕೆ ದುಡಿವ ಪಕ್ಷಕ್ಕೆ ಮತ ಹಾಕುವುದು ಅಗತ್ಯ ಎಂದು ಹೇಳಲಾಗುತ್ತಿದೆ ಎಂದರು.
ಪ್ರಬುದ್ಧ ಹುಬಳಿ, ಅಶ್ವಿನಿ ಮದನಕರ್, ಸಂಧ್ಯಾರಾಜ ಸ್ಯಾಮುವೆಲ್, ಅಬ್ದುಲ್ ಖಾದರ್ ಇದ್ದರು.