ಕಲಬುರಗಿ: ಖರ್ಗೆ ಹಾಗೂ ಕುಟುಂಬವನ್ನು ಸಾಫ್ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಟೇಪ್ ಬಹಿರಂಗವಾಗಿದ್ದು ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ಈಗಾಗಲೇ ಸಂಘಟನೆ ಕಡೆಯಿಂದ ಒಂದು ದೂರು ದಾಖಲಾಗಿದ್ದು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಕಾನೂನು ಘಟಕದೊಂದಿಗೆ ಚರ್ಚಿಸಿ ಕಾಂಗ್ರೆಸ್ ನಾಳೆ ಡಿಜಿ ಅವರಿಗೆ ಮತ್ತೊಂದು ದೂರು ನೀಡಲಾಗುವುದು ಎಂದರು.
ಈ ಕುರಿತು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಿಯಾಂಕ್ ಖರ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಸೋಲುವ ಭೀತಿ ಎದುರಿಸುತ್ತಿದ್ದು ಮೋದಿ ಅವರಿಂದ ಹಾಗೂ ಬೊಮ್ಮಾಯಿ ಅವರ ದುರಾಡಳಿತದಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ತಂತ್ರಗಳನ್ನು ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಪ್ರಕರಣ ಬಿಜೆಪಿಯವರಿಗೆ ಆಗಿದ್ದರೆ ಇಷ್ಟೊತ್ತಿದೆ ಸ್ವಯಂ ದೂರು ದಾಖಲಾಗುತ್ತಿತ್ತು. ಆದರೆ ಇಲ್ಲಿ ಕೊನೆ ಪಕ್ಷ ಅಪರಿಚಿತರ ಮೇಲಾದರೂ ದೂರು ದಾಖಲಾಗಬೇಕಿತ್ತು ಅದೂ ಆಗಿಲ್ಲ. ಖರ್ಗೆ ಹಾಗೂ ಕುಟುಂಬವನ್ನು ಯಾಕೆ ಸಾಯಿಸಬೇಕು ಎನ್ನುವುದಕ್ಕೆ ಬಿಜೆಪಿಗರು ಉತ್ತರ ಹೇಳಬೇಕು. ಇಎಸ್ ಐ ಆಸ್ಪತ್ರೆ, ಕೇಂದ್ರಿಯ ವಿದ್ಯಾಲಯ ತಂದಿದ್ದಕ್ಕೆ ಸಾಯಿಸಬೇಕಾ ? ಎಂದು ಖಾರವಾಗಿ ಪ್ರಶ್ನಿಸಿದರು.
ಪಾಪ, ಬಿಜೆಪಿ ಅಭ್ಯರ್ಥಿ ಅಷ್ಟೊಂದು ಜಾಣನಲ್ಲ ಅವನು ಇನ್ನೂ ಅಕ್ಕಿ ಪಕ್ಕಿ ಲೆವೆಲ್ ನಲ್ಲಿಯೇ ಇದ್ದಾನೆ. ಇದರ ಹಿಂದಿನ ಕಿಂಗ್ ಪಿನ್ ಬಿಜೆಪಿ ಹಾಗೂ ಆರ್ ಎಸ್ ಎಸ್. ಅದರ ಉಸ್ತುವಾರಿಯನ್ನು ರವಿಕುಮಾರ್ ಗೆ ವಹಿಸಲಾಗಿದೆ. ಪಾಪ ತಾನೇ ಅಭ್ಯರ್ಥಿ ಅಂದುಕೊಂಡ ರವಿಕುಮಾರ ಎಲ್ಲಾ ಕಡೆ ಓಡಾಡಿ ಸುಸ್ತಾಗಿದ್ದಾರೆ. ಅವರು ಜೇವರ್ಗಿ ಹಾಗೂ ಚಿತ್ತಾಪುರದಲ್ಲಿ ಟಿಕೇಟ್ ಮಾರಿಕೊಂಡಿದ್ದಾರೆ ಎಂದು ಬಿಜೆಪಿಗರೇ ಮತನಾಡಿಕೊಳ್ಳುತ್ತಿದ್ದಾರೆ ಅದಕ್ಕೆ ಉತ್ತರಿಸಲಿ ಎಂದರು.
ಮಣಿಕಂಠನ ಮೇಲೆ ಪ್ರಿಯಾಂಕ್ ಖರ್ಗೆ ದೂರು ದಾಖಲಿಸಿದ್ದಾರೆ ಎನ್ನುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಅವರಿಗೆ ಬುದ್ದಿ ಇದೆಯೇನ್ರೀ.? ಯಾರದೋ ಕೈಕಾಲು ಹಿಡಿಯುವವನ್ನ ಅಧ್ಯಕ್ಷರನ್ನಾಗಿ ಮಾಡಿದರೆ ಹೀಗೆ ಆಗುತ್ತದೆ. ಐಪಿಸ್ ಪಾಸ್ ಮಾಡಿದವರು ಮಾತನಾಡುವ ರೀತಿನಾ ಇದು? ಅವರು ಈ ಹಿಂದೆ ಪೊಲೀಸ್ ಅಧಿಕಾರಿಯಾಗಿದ್ದಾಗ ರಾಜಕಾರಣಿಗಳು ಒತ್ತಡ ತಂದರೆ ಕೇಸು ಹಾಕುತ್ತಿದ್ದರಾ? ಎಂದು ಪ್ರಶ್ನಿಸಿದರು. ಅಡಿಯೋ ನಕಲಿ ಎಂದು ಬಿಜೆಪಿಯ ಎನ್ ರವಿಕುಮಾರ ಹೇಳಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಹಾಗಾದರೆ ರವಿಕುಮಾರ ಅವರಿಗೆ ಎಲ್ಲ ಗೊತ್ತಿದೆಯಾ? ಈ ಪ್ರಶ್ನೆಗೆ ಅವರೇ ಉತ್ತರಿಸಲಿ ಎಂದರು.
ವಿಶ್ವನಾಥ ಪಾಟೀಲ ಹೆಬ್ಬಾಳ ಅವರನ್ನ ಕಾಂಗ್ರೆಸ್ ಕೊಂಡುಕೊಂಡಿದೆ ಎಂದು ರವಿಕುಮಾರ ಆರೋಪಿಸಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿ ಉತ್ತರಿಸಿದ ಖರ್ಗೆ, ವಿಶ್ವನಾಥ ಪಾಟೀಲ ಅವರು ನಮ್ಮ ಜಿಲ್ಲೆಯ ಹಿರಿಯ ನಾಯಕರು ಈಗಾಗಲೇ ಮೂರು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ ಅವರ ಹಿನ್ನೆಲೆ ತಿಳಿದುಕೊಂಡು ರವಿಕುಮಾರ ಮಾತನಾಡಲಿ. ಅವರ ಬಗ್ಗೆ ಮಾತನಾಡುವ ರವಿಕುಮಾರ ಯಾವುದಾದರೂ ಒಂದು ಗ್ರಾಮಪಂಚಾಯತ ಚುನಾವಣೆ ನಿಂತು ಗೆದ್ದು ತೋರಿಸಲಿ ಎಂದು ಸವಾಲಾಕಿದರು.