ಕಲಬುರಗಿ: ದೇಶದಲ್ಲಿ ಕಾಂಗ್ರೆಸ್ ಪಕ್ಷದ ವ್ಯಾರಂಟಿ ಮುಗಿದಿದ್ದು, ಮುಳುಗುವ ದೋಣಿಯಾಗಿರುವ ಪಕ್ಷ ಜನರಿಗೆ ಗ್ಯಾರೆಂಟಿ ಕೊಡುತ್ತೇವೆ ಎಂದು ಹೇಳುತ್ತಿರುವುದು ನೋಡಿದರೆ ಹಾಸ್ಯಸ್ಪದವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯವಾಡಿದರು.
ಅವರು ಶನಿವಾರ ಶಹಾಬಾದ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮಡು ಪರ ಆಯೋಜಿಸಿದ್ದ ರೋಡ ಶೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಪಕ್ಷದವರು ಅಧಿಕಾರದ ದಾಹಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.ಅಲ್ಲದೇ ಜನರಿಗೆ ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ.ಅದಕ್ಕೆ ಕಿವಿಗೊಡದೇ ಕಳೆದ ಬಾರಿ ಬಿಜೆಪಿ ಮೇಲೆ ತೋರಿದ ಆಶೀರ್ವಾದ ಮತ್ತೊಮ್ಮೆ ತೋರುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ದೇಶದಲ್ಲಿ ಹೆಮ್ಮಾರಿ ಕರೊನಾ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಿರ್ಭಿತಿಯಿಂದ ಎದುರಿಸಿದರು. ಕರೊನಾ ವ್ಯಾಕ್ಸಿನ್ ಕಂಡು ಹಿಡಿದಾಗ ಇದೇ ಕಾಂಗ್ರೆಸ್‍ನವರು ಅದು ನಕಲಿ ಎಂದು ಅಪಪ್ರಚಾರ ಮಾಡಿದ್ದರು. ಆಗ ಪ್ರಧಾನಿ ಮೋದಿ ಅವರೇ ಮೊಟ್ಟ ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಜನತೆಗೆ ಧೈರ್ಯ ತುಂಬಿದರು ಎಂದು ಹೇಳಿದರು.
ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ಅತ್ಯಂತ ಜನಪ್ರೀಯ ಪ್ರಧಾನಿಯಾಗಿದ್ದು, ವಿಶ್ವದಲ್ಲಿಯೇ ಭಾರತ ದೇಶವನ್ನು ನೋಡುವಂತೆ ಮಾಡಿದ್ದಾರೆ. 450 ರಾಷ್ಟ್ರೀಯ ಹೆದ್ದಾರಿ, ಬೀದರ್- ನಾಂದೆಡ್ ರೈಲ್ವೆ ಲೈನ್, ರಾಜ್ಯದಲ್ಲಿ 10 ಸಾವಿರ ಕಿ.ಮೀಟರ್ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಗ್ರಾಮೀಣ ರಸ್ತೆ ನಿರ್ಮಾಣ ಮಾಡಲಾಗಿದೆ.ಸೂರತ್ ಚೈನ್ನೈ ಎಕಾನಾಮಿಕ್ ಕಾರಿಡಾರ್ ಯೋಜನೆ ಪ್ರಗತಿಯಲ್ಲಿದೆ. ಬಸವರಾಜ ಮತ್ತಿಮಡು ಅವರು ಸಾಕಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದು, ಅವರಿಗೆ ಮತ್ತೊಮ್ಮೆ ಸೇವೆ ಮಾಡುವ ಅವಕಾಶವನ್ನು ಒದಗಿಸಿಕೊಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.ರಾಜ್ಯದಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಸಾಕಷ್ಟು ಅನುದಾನ ನೀಡುವ ಮೂಲಕ ಅಭಿವೃದ್ಧಿಯ ಹೊಳೆಯನ್ನೇ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಸವರಾಜ ಮತ್ತಿಮಡು ಮಾತನಾಡಿ, ತಮ್ಮೆಲ್ಲರ ಆಶೀರ್ವಾದಿಂದ ಶಾಸಕನಾಗಿ ಐದು ವರ್ಷಗಳ ಅವಧಿಯಲ್ಲಿ ಸುಮಾರು 1500 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕಣ್ಣಿಗೆ ಕಾಣುವಂತೆ ಮಾಡಿದ್ದೆನೆ.ಕ್ಷೇತ್ರದ ಜನರು ಬಂದಾಗ ಅವರಿಗೆ ಸಮಯ ಕೊಟ್ಟು ಸ್ಪಂದಿಸಿದ್ದೆನೆ.ತಮ್ಮ ಸುಖ-ದುಃಖಗಳಲ್ಲಿ ಪಾಲ್ಗೊಂಡಿದ್ದೆನೆ.ಹಗಲು ರಾತ್ರಿ ಎನ್ನದೇ ತಮ್ಮೆಲ್ಲರ ಸೇವೆ ಮಾಡಿದ್ದೆನೆ.ತಾವು ಕೂಡ ಐದು ವರ್ಷ ಅತ್ಯಂತ ಪ್ರೀತಿಯಿಂದ ತಮ್ಮ ಮನೆಯ ಮಗನಾಗಿ ಕಂಡಿದ್ದೀರಿ.ಎಂದಿಗೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಚುನಾವಣೆ ದಿನದಂದು ಕಮಲದ ಗುರುತಿಗೆ ಮತದಾನ ಮಾಡುವ ಮೂಲ ಮತ್ತೊಂದು ಅವಕಾಶ ನೀಡಿ. ನಿಮ್ಮ ಸೇವಕನಾಗಿ ದುಡಿಯುತ್ತೆನೆ ಎಂದರು.
ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಸಂಗಮೇಶ ವಾಲಿ,ಶಶಿಕಲಾ ಟೆಂಗಳಿ, ಜಯಶ್ರೀ ಬಸವರಾಜ ಮತ್ತಿಮಡು, ಭಾಗಿರಥಿ ಗುನ್ನಾಪೂರ, ನಿಂಗಣ್ಣ ಹುಳಗೋಳಕರ್, ಬಸವರಾಜ ಬಿರಾದಾರ,ರವಿ ರಾಠೋಡ, ಸಿದ್ರಾಮ ಕುಸಾಳೆ,ಚಂದ್ರಕಾಂತ ಗೊಬ್ಬೂರಕರ್,ಶಿವುಗೌಡ, ವಿರೇಶ ಬಂದಳ್ಳಿ, ಮಹಾದೇವ ಗೊಬ್ಬೂರಕರ್, ಶಿವಕುಮಾರ ತಳವಾರ, ದತ್ತಾ ಪಂಡ್, ದಿನೇಶ ಗೌಳಿ,ಶರಣು ವಸ್ತ್ರದ್, ಯಲ್ಲಪ್ಪ ದಂಡಗುಲಕರ್ ಸೇರಿದಂತೆ ಅನೇಕರು ಇದ್ದರು.