ಕಲಬುರಗಿ: ಭ್ರಷ್ಟಾಚಾರಿಗಳನ್ನೇ ಪಕ್ಕದಲ್ಲಿ ಕೂಡಿಸಿಕೊಂಡು ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಸರ್ಕಾರ ತರುವುದಾಗಿ ಹೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ವಾಡಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಮತಯಾಚನೆ ಮಾಡಿ ಮಾತನಾಡುತ್ತಿದ್ದರು.
ಲಂಚ ವ್ಯಾಪಕವಾಗಿದೆ. 40% ಕಮಿಷನ್ ನಡೆಯುತ್ತಿದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. 30%. ಕಮಿಷನ್ ಮಠಗಳಿಗೆ ನೀಡುವ ಅನುದಾನದಲ್ಲಿ ನಡೆದಿದೆ ಇದನ್ನು ಸ್ವಾಮಿಗಳು ಹೇಳಿದ್ದಾರೆ. ಪಿಎಸ್ ಐ ನೇಮಕಾತಿಯಲ್ಲಿ ಹಗರಣ ನಡೆದಿದೆ. ಇಷ್ಟಾದರೂ ಕೂಡಾ ಮೋದಿ ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡುವುದಾಗಿ ಭ್ರಷ್ಟರನ್ನೇ ಪಕ್ಕ ಕೂಡಿಸಿಕೊಂಡು ಹೇಳುತ್ತಿದ್ದಾರೆ ಎಂದರು.
ನ ಖಾವೂಂಗಾ ನ ಖಾನೇದೂಂಗಾ ಎಂದಿದ್ದ ಮೋದಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಾಯಿಬಿಡುತ್ತಿಲ್ಲ ಎಂದರೆ ಅವರೂ ಕೂಡಾ ಶಾಮೀಲಾಗಿದ್ದಾರೆ ಎನ್ನಬೇಕಾಗುತ್ತದೆ ಎಂದು ಆರೋಪಿಸಿದರು.
‘ ಜೈ ಭಜರಂಗಬಲಿ ತೋಡೋ ಭ್ರಷ್ಟಾಚಾರಿಯೋಂಕೆ ನಲಿ ‘ ಎಂದು ಘೋಷಣೆ ಹಾಕಿದ ಖರ್ಗೆ ನಾವು ಭ್ರಷ್ಟಾಚಾರ ವನ್ನು ಕೊನೆಗಾಣಿಸಬೇಕಿದೆ. ನಾನು ರಾಜ್ಯದ 60 ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದೇನೆ ಎಲ್ಲಕಡೆಯೂ ಕಾಂಗ್ರೆಸ್ ಪರವಾದ ವಾತವಾರಣವಿದೆ ಎಂದರು.
ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದೀರಿ ಆದಾಯ ದ್ವಿಗುಣವಾಯ್ತಾ? ಕಾರ್ಮಿಕರನ್ನು ಸುರಕ್ಷಿತವಾಗಿಡುವುದಾಗಿ ಹೇಳಿದ್ದರು ಆದರೆ ಅವರ ಪ್ರಾವಿಡೆಂಟ್ ಫಂಡನ್ನು ಅದಾನಿಗೆ ಕೊಟ್ಟಿದ್ದಾರೆ. ನಾವು ಇದನ್ನು ಪ್ರಶ್ನಿಸಿದರೆ ಖರ್ಗೆಯವರು ನನಗೆ ಹಾಗೆ ಅಂದರು ಹೀಗೆ ಅಂದರು ಎಂದು ಹೇಳುತ್ತಾರೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದರು.
ಪೆಟ್ರೋಲ್ ಡಿಸೇಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಣನೀಯವಾಗಿ ಏರಿವೆ. ಯುವಕರಿಗೆ ಉದ್ಯೋಗ ಕೊಡಲಿಲ್ಲ ಬೆಲೆ ಕಡಿಮೆ ಮಾಡಬೇಕು ಹಾಗೂ ಉದ್ಯೋಗ ಕೊಡಬೇಕು ಎಂದು ಮೋದಿಗೆ ಗೊತ್ತಾಗುವುದಿಲ್ಲವೇ? ಇದನ್ನು ಬಿಟ್ಟು ಬೇರೆ ಕತೆ ಹೇಳುತ್ತಾರೆ. ಜನರಿಗೆ ದಾರಿ ತಪ್ಪಿಸುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷ 70 ವರ್ಷದಲ್ಲಿ ಏನೂ ಮಾಡದಿದ್ದರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ಗಾಂಧಿ, ನೆಹರು ಹಾಗೂ ಇತರರು ಸ್ವಾತಂತ್ರ್ಯ ಕೊಡಿಸಿದರು. ಆಮೇಲೆ ಡಾ.ಅಂಬೇಡ್ಕರ್ ಸಂವಿಧಾನ ತಂದರು. ನಾವು ಶಾಲೆ, ಕಾಲೇಜು, ಆಣೆಕಟ್ಟು ಕಟ್ಟಿದ್ದೇವೆ. ನೀವು ಅದೇ ಶಾಲೆಯಲ್ಲಿಯೇ ಓದಿದ್ದೀರಿ. ಹೀಗಾಗಿ ಮೋದಿ ನೀವು ಸಿಎಂ ಹಾಗೂ ಪ್ರಧಾನಿ ಆಗಿದ್ದೀರಿ ಎಂದರು.
ಸಂಸತ್ತಿನಲ್ಲಿ ನಾನು ಮಾತನಾಡಿದ ಶಬ್ಧವೊಂದಕ್ಕೆ ಕತ್ತರಿ ಹಾಕಿದರು. ನಾವು ಸಂವಿಧಾನ ಪ್ರಕಾರ ಮಾತನಾಡಿದರೂ ಬಜೆಪಿಯರು ಸಹಿಸಲ್ಲ. ಹಸ್ತದ ಚಿಹ್ನೆಯಡಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಗಳ ಪರ ರಾಜ್ಯದೆಲ್ಲಡೆ ಪ್ರಚಾರ ಮಾಡುತ್ತಿದ್ದೇನೆ ಹಾಗೆ ಪ್ರಿಯಾಂಕ್ ಖರ್ಗೆ ಪರ ಪ್ರಚಾರ ಮಾಡಿ ಹೆಚ್ಚಿನ ಮತಗಳಿಂದ ಆರಿಸಿ ತನ್ನಿ ಎಂದು ಕೇಳಲು ಬಂದಿದ್ದೇನೆ. ಪ್ರಿಯಾಂಕ್ ನನ್ನ ಮಗ ಅವನಿಗೆ ಓಟು ಕೊಡಿ ಎಂದು ಕೇಳುತ್ತಿಲ್ಲ. ಅವನು ಅಭಿವೃದ್ದಿ ಮಾಡಿದ್ದರೆ ಮತ ಕೊಡಿ. ಅವನನ್ನು ನೀವು ಗೆಲ್ಲಿಸಬೇಕು ಹಾಗಾದರೆ ನನ್ನ ಮರ್ಯಾದೆ ಉಳಿಯುತ್ತದೆ. ನಾನು 10,000 ಮತದಾರರಿಂದ ಆಯ್ಕೆಯಾಗಿ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಿಮ್ಮ ಹೆಸರಿಗೆ ಕಳಂಕ ತರುವ ಕೆಲಸ ಮಾಡಿಲ್ಲ. ಎಲ್ಲೇ ಹೋದರೂ ಗುಲಬರ್ಗಾದ ಹೆಮ್ಮೆ ಬರುವಂತ ಕೆಲಸ ಮಾಡಿದ್ದೇನೆ. ಹಾಗಾಗಿ, ಎಲ್ಲರೂ ಪ್ರಿಯಾಂಕ್ ನಿಗೆ ಮತ ನೀಡಿ ಎಂದು ಮನವಿ ಮಾಡಿದರು.
ವಾಡಿ ಪಟ್ಟಣವನ್ನು ಮರೆಯಲು ಸಾಧ್ಯ ವಿಲ್ಲ ಯಾಕೆಂದರೆ ಬಾಬಾಸಾಹೇಬರು ಮುಂಬೈನಿಂದ ಸಿಕಂದರಾಬಾದ್ ಗೆ ಹೋಗುವಾಗ ವಾಡಿ ಜಂಕ್ಷನ್ ನಲ್ಲಿ ಇಳಿದಿದ್ದರು ಹಾಗಾಗಿ ಇದು ಪವಿತ್ರ ಭೂಮಿ. ಹಾಗಾಗಿ ಇಲ್ಲಿ ಪ್ರಚಾರ ಸಭೆ ಮಾಡುತ್ತಿದ್ದೇವೆ. ಮೋದಿಯಂತೆ ನಾನು ಕೂಡಾ ಈ ರಾಜ್ಯದ ಹಾಗೂ ಕಲಬುರಗಿಯ ಮಣ್ಣಿನ ಮಗ.ಹಾಗಾಗಿ ಇಲ್ಲಿ ಕಾಂಗ್ರೆಸ್ ಗೆ ಓಟು ಹಾಕಬೇಕು. ಈ ದೇಶದಲ್ಲಿ ಸಂವಿಧಾನ ಉಳಿಸಬೇಕಿದೆ. ಮಾತನಾಡುವ ಬರೆಯುವ ಸ್ವಾತಂತ್ರ್ಯ ಉಳಿಸಬೇಕಿದೆ ಎಂದ ಖರ್ಗೆ ಪ್ರಸ್ತುತ ಸರ್ಕಾರದ ಬಗ್ಗೆ ನಾನು ಹೆಚ್ಷು ಹೇಳಲಾರೆ. ಮೋದಿ ಪ್ರಚಾರ ಕ್ಕಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಅವರು ಈ ನಾಡಿನ ಜನರಿಗೆ ಏನು ಕೊಟ್ಟಿದ್ದಾರೆ ಎಂದು ಮತ ಕೇಳಲು ಬಂದಿದ್ದಾರೆ ಎಂದು ನಾನು ಕೇಳುತ್ತೇನೆ.
ಬಹಳ ದಿನಗಳ ನಂತರ ವಾಡಿ ಚಿತ್ತಾಪುರ ಮತ ಕ್ಷೇತ್ರ ದಲ್ಲಿ ಕಾಲಿಟ್ಟಿದ್ದೇನೆ. ಇಲ್ಲಿ ಎರಡು ಸಭೆ ಮಾಡಲು ತಯಾರು ಮಾಡಿದ್ದೇವು ಆದರೆ ಒಂದು ಸಭೆ ಮಾಡಿದೆವು. ಕೇಂದ್ರೀಯ ವಿಶ್ವವಿದ್ಯಾಲಯ, ಯಾದಗಿರಿಯಲ್ಲಿ ರೇಲ್ವೆ ಭೋಗಿ ಕಂಪನಿ, ರಾಷ್ಟ್ರೀಯ ಹೆದ್ದಾರಿ ತಂದಿದ್ದೇನೆ. ಟೆಕ್ಸಟೈಲ್ ಪಾರ್ಕ್, ಏಮ್ಸ್ ಆಸ್ಪತ್ರೆ ನಿರ್ಮಾಣ ಹಾಗೂ ರೇಲ್ವೆ ಕೋಚ್ ಕಂಪನಿಯಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ನೀಡಲು ಪತ್ರ ಬರೆದೆ ಆದರೆ ಮೋದಿ ಸರ್ಕಾರ ಯಾವುದನ್ನು ಮಾಡಲಿಲ್ಲ ಹಾಗಾದರೆ ಜನರು ಯಾಕೆ ಮತ ಹಾಕಬೇಕು? ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಈ ಮೊದಲು ಮಲ್ಲಿಕಾರ್ಜುನ ಖರ್ಗೆಯವರಿಗೆ ಹೆದರುತ್ತಿದ್ದರು ಈಗ ಪ್ರಿಯಾಂಕ್ ಖರ್ಗೆಗೂ ಹೆದರುತ್ತಿದ್ದಾರೆ ಎಂದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ ಮಾತನಾಡಿ ಸಮಾಜಘಾತುಕ, ಗಡಿಪಾರು ಆಗಿರುವ ಕ್ರಿಮಿನಲ್ ಒಬ್ಬನನ್ನು ಬಿಜೆಪಿ ಚಿತ್ತಾಪುರದಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದೆ. ಇದನ್ನು ಗಮನಿಸಿ ಅಸಹ್ಯವಾಗಿದ್ದರಿಂದ ಪಕ್ಷದಿಂದ ಹೊರಗೆ ಬಂದೆ. ಬಿಜೆಪಿ ಲಜ್ಜೆಗೆಟ್ಟ ಪಕ್ಷ ಆ ಪಕ್ಷದ ನಾಯಕರನ್ನು ರಾಜಕೀಯದಿಂದ ನಿವೃತ್ತಗೊಳಿಸಬೇಕು ಎಂದರು.
ಇತ್ತೀಚಿಗೆ ಉತ್ತರಪ್ರದೇಶ ಸಿಎಂ ಯೋಗಿ ಮಣಿಕಂಠನ ಪರ ಮತಯಾಚಿಸಿದರು. ಅಲ್ಲಿ ಯುಪಿಯಲ್ಲಿ ಗೂಂಡಾಗಳ ಮೇಲೆ ಬುಲ್ಡೋಜರ್ ಹತ್ತಿಸುತ್ತೀರಿ ಆದರೆ ಇಲ್ಲಿ ಒಬ್ಬ ಗೂಂಡಾ ಪರ ಮತ ಕೇಳುತ್ತೀರಿ ಇದು ನಾಚಿಕೆಗೇಡು ಎಂದು ಹರಿಹಾಯ್ದರು.
ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ಶ್ರೀಧರಬಾಬು, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಡೇವಿಡ್ ಸಿಮೆಯೋನ್, ವಿಶ್ವನಾಥ ಪಾಟೀಲ ಹೆಬ್ಬಾಳ, ಭೀಮಣ್ಣ ಸಾಲಿ, ಲಚ್ಚಪ್ಪ ಜಮಾದಾರ, ಟೋಪಣ್ಣ ಕೊಮಟೆ, ಅಜೀಜ್ ಸೇಠ, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಕಾಳಗಿ, ಸುನಿತಾ ಸಾಲೋಮನ್, ಮಕ್ತಾರ್ ಪಟೇಲ, ಶೀಲಾ ಕಾಶಿ, ಶಂಕ್ರಯ್ಯಸ್ವಾಮಿ, ಶರಣು ವಾರದ, ಶರಣಪ್ಪ ನಾಟೇಕರ್ ಸೇರಿದಂತೆ ಹಲವರಿದ್ದರು.