ಶಹಾಬಾದ: ಪ್ರಹ್ಲಾದ್ ಜೋಶಿ ಅವರಿಗೆ ಪಟ್ಟಕಟ್ಟುವ ಉದ್ದೇಶದಿಂದ ಬಿಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮರತೂರ ಬಿಜೆಪಿ ವಿರುದ್ಧ ಹರಿಹಾಯ್ದರು.
ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ನಾಯಕರು ಲಿಂಗಾಯತ ವಿರೋಧಿ ಎಂದು ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಬಸವಣ್ಣನವರ ಆದ್ಯ ಭಕ್ತರು. ಬಸವ ತತ್ವದ ಮೇಲೆ ಆಡಳಿತ ನಡೆಸಿದ ಮಹಾನ್ ನಾಯಕ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಕಟ್ಟಿದ ಬಿ.ಬಿ.ಶಿವಪ್ಪ ಕಡೆಗಣನೆ, ಬಿ.ಎಸ್.ಯಡಿಯೂರಪ್ಪ ಅವರನ್ನು ಅವಧಿ ಪೂರ್ವ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಬಿಜೆಪಿಯೇ. ಇದು ಲಿಂಗಾಯತರಿಗೆ ಅವಹೇಳನ ಮಾಡಿದಂತೆ ಆಗುವುದಿಲ್ಲವೇ? ಬಿ.ಎಸ್.ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿದ್ದು ಲಿಂಗಾಯತರಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಪ್ರಹ್ಲಾದ ಜೋಶಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರತಿμÁ್ಠಪಿಸಲು ಬಿಜೆಪಿ ಎಲ್ಲ ಕಾರ್ಯ ಯೋಜನೆ ರೂಪಿಸಿತ್ತು. ಆದರೆ ಲಿಂಗಾಯತ ಮಠಾಧೀಶರ ವಿರೋಧದಿಂದಾಗಿ ಹೆದರಿ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿತು ಎಂದರು.
ಬೇರೆ ಪಕ್ಷದ ಶಾಸಕರನ್ನು ಸೆಳೆದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಅಧಿಕಾರಕ್ಕೆ ಬರುವವರೆಗೂ ಅವರನ್ನು ಮುಖ್ಯಮಂತ್ರಿಯಾಗಿಸಿ, ನಂತರ ಕೆಳಗಳಿಸಿದ್ದು ಅನ್ಯಾಯವಲ್ಲವೇ? ಕಾರಣವಿಲ್ಲದೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಕುರಿತು ಇಲ್ಲಿಯವರೆಗೂ ಬಿಜೆಪಿ ಹೈಕಮಾಂಡ್ ಸ್ಪಷ್ಟಿಕರಣ ನೀಡಿಲ್ಲವೇಕೆ? ಎಂದು ಪ್ರಶ್ನಿಸಿದರು.
ಪಕ್ಷ ಕಟ್ಟಿದ ಜಗದೀಶ ಶೆಟ್ಟರ್, ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಅವರಿಗೆ ಪಕ್ಷ ಬಿಡುವ ವಾತಾವರಣ ನಿರ್ಮಿಸಿದ್ದು ಲಿಂಗಾಯತರ ಕಡೆಗಣನೆ ಅಲ್ಲವೇ? ಲಿಂಗಾಯತರನ್ನು ಕಡೆಗಣಿಸಿದ್ದು ಬಿಜೆಪಿ ಎಂದು ಘಂಟಾಘೋಷವಾಗಿ ಹೇಳಬಲ್ಲೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಅತ್ಯಂತ ಗೌರವದಿಂದ ಕಂಡಿದೆ. ಅಧಿಕಾರ ನೀಡಿ ಗೌರವಿಸಿದೆ. ಕಾಂಗ್ರೆಸ್ ಕಟ್ಟುವಲ್ಲಿ ಲಿಂಗಾಯತ, ಒಕ್ಕಲಿಗ, ಅಲ್ಪಸಂಖ್ಯಾತ, ದಲಿತರ ಒಗ್ಗಟ್ಟಿನ ಹೋರಾಟವಿದೆ. ಲಿಂಗಾಯತರ ಸಹಭಾಗಿತ್ವ ಪಕ್ಷದಲ್ಲಿ ಪ್ರಮುಖವಾಗಿದೆ.
ಈಗಾಗಲೇ ಬಿ.ಎಲ್.ಸಂತೋಷ ಅವರು ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಹೇಳಿ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅವರಿಗೆ ಕೇವಲ ಮತೀಯ ಭಾವನೆ ಕೆರಳಿಸುವುದು ಮಾತ್ರ ಗೊತ್ತಿದೆ ಹೊರತು ಜನರ ಮಧ್ಯೆ ಬೆಳೆದು ಬಂದಿಲ್ಲ ಎಂದರು.
ಈ ಬಾರಿ ಚುನಾವಣೆಯಲ್ಲಿ ಲಿಂಗಾಯತ ಸಮಾಜ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಲಿದೆ ಎಂದು ಶಿವಾನಂದ ಪಾಟೀಲ ಹೇಳಿದರು.