ನವದೆಹಲಿ: ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮನವರಿಕೆಯಾಗಿದೆ. ಚರ್ಚೆ ಮಾಡಿದ ನಂತರ ಹಣವನ್ನು ಬಿಡುಗಡೆ ಮಾಡುತ್ತೇನೆ ಎಂದು ಮೋದಿ ತಿಳಿಸಿದ್ದಾರೆ ಎಂಬುದಾಗಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ಲೋಕ ಕಲ್ಯಾಣ ಮಾರ್ಗ್‍ನಲ್ಲಿರುವ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಪ್ರಧಾನಿ ಮೋದಿ ಅವರ ಬಳಿ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ವರ್ಷದಲ್ಲಿ ಹಿಂದೆ ಎಂದು ನೋಡದ ಪ್ರವಾಹ ಪರಿಸ್ಥಿತಿ ಇಂದು ರಾಜ್ಯದಲ್ಲಿ ಎದುರಾಗಿದೆ. 15 ದಿನದ ಹಿಂದೆ ರಾಜ್ಯದಲ್ಲಿ ಬರ ಇತ್ತು. ಆದರೆ ಇಂದು ರಾಜ್ಯದ ಎಲ್ಲಾ ಡ್ಯಾಂಗಳು ತುಂಬಿವೆ. ಇದರ ಬಗ್ಗೆ ಮೋದಿ ಅವರು 40 ನಿಮಿಷಗಳ ಕಾಲ ಮಾಹಿತಿ ಪಡೆದಿದ್ದಾರೆ. ಎಂದು ತಿಳಿಸಿದರು.
ಈ ವೇಳೆ ಮಾಧ್ಯಮದವರು ರಾಜ್ಯಕ್ಕೆ 3 ಸಾವಿರ ಕೋಟಿ ಮೊದಲ ಹಂತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಕೇಳಿದಾಗ, ನಾನು ಅಂಕಿಅಂಶಗಳ ಬಗ್ಗೆ ಇಲ್ಲಿ ಚರ್ಚೆ ಮಾಡಲ್ಲ. ಪ್ರವಾಹದಿಂದ ರಾಜ್ಯಕ್ಕೆ ಸುಮಾರು 40 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ರಾಜ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ನರೇಂದ್ರ ಮೋದಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದರು ಎಂದು ಉತ್ತರಿಸಿದರುಈಗ ರಾಜ್ಯಕ್ಕೆ ಪ್ರವಾಹ ಅಧ್ಯಯನ ತಂಡ ಕಳುಹಿಸುತ್ತಾರೆ. ನಂತರ ಪರಿಹಾರ ಬಿಡುಗಡೆ ಮಾಡುತ್ತಾರೆ. ತಕ್ಷಣ ಹಣ ಬಿಡುಗಡೆ ಮಾಡುವಂತೆ ನಾವು ಮನವಿ ಮಾಡಿದ್ದೇವೆ. ಅವರು ಚರ್ಚೆ ಮಾಡಿ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ ಎಂದು ಬಿಎಸ್‍ವೈ ಹೇಳಿದರು.
ಈ ಸಂದರ್ಭದಲ್ಲಿ ಪ್ರಹಲ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಆರ್ ಅಶೋಕ್, ಗೋವಿಂದ್ ಕಾರಜೋಳ ಇದ್ದರು.