ಕಲಬುರಗಿ: ಚಿತಾಪುರ ತಾಲೂಕಿನ ಚಾಮನೂರು ಮತ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಮತದಾರನ ಮತವನ್ನು ಬದಲಿ ಪಕ್ಷಕ್ಕೆ ಹಾಕಿದ್ದರಿಂದ ಗಲಾಟೆ ಆಗಿರುವ ಘಟನೆ ಜರುಗಿದೆ. ಬಿ.ಸಿ. ಚವ್ಹಾಣ ಎಂಬ ಚುನಾವಣಾ ಅಧಿಕಾರಿಯೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ.
ಈ ಅಧಿಕಾರಿ ಮತ ಗಟ್ಟೆಗೆ ಬಂದಿದ್ದ ಬಸಮ್ಮ ಯಂಟ್ಮನ ಎಂಬ ಮಹಿಳೆ ಮತಗಟ್ಟೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಗೆ ಬಟನ್ ಒತ್ತಲು ತಿಳಿಸಿದ್ದಾಳೆ. ಆದರೆ ಅಧಿಕಾರಿ ಬಿಜೆಪಿ ಅಭ್ಯರ್ಥಿಯ ಮುಂದಿರುವ ಬಟನ್ ಒತ್ತಿದ್ದಾರೆ. ಅದು ಮಹಿಳೆ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದಾಗ ಘಟನೆ ಬಯಲಿಗೆ ಬಂದು ಗಲಾಟೆಯಾಗಿದೆ.
ಇದಕ್ಕೂ ಮೊದಲು ಮತಯಂತ್ರ ಪರೀಕ್ಷೆ ಸಮಯದಲ್ಲಿ ಸಹ ಬಿಜೆಪಿಗೆ ಸುಮಾರು ಐವತ್ತಕ್ಕೂ ಅಧಿಕ ಮತ ಹಾಕಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಚಿತ್ತಾಪುರ ಚುನಾವಣಾಧಿಕಾರಿಗೆ ವಿಷಯ ತಿಳಿಸಿ ಅಧಿಕಾರಿಯನ್ನು ಬದಲಿಸಲು ಒತ್ತಾಯಿಸಿದರು.
ಇದರಿಂದಾಗಿ ಅಧಿಕಾರಿಯನ್ನು ಬದಲಾವಣೆ ಮಾಡಿದ ಬಳಿಕ ಮತದಾನ ಸುರಳೀತಗೊಂಡಿತು ಎಂದು ಮೂಲಗಳು ತಿಳಿಸಿವೆ.