ಕಲಬುರಗಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಪಡೆದು ಸಾಧನೆಗೈದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸತ್ಕರಿಸುವ ನಿಟ್ಟಿನಲ್ಲಿ ಪ್ರತಿಭಾ ಗೌರವ ಪುರಸ್ಕಾರ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಾಳೆ ( ಮೇ-12 ) ಬೆಳಗ್ಗೆ 11.30 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಪರಿಷತ್ತು ಮಾಡುತ್ತಿದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬುವ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಜತೆಗೆ ತಮ್ಮ ಜೀವನದ ಪರೀಕ್ಷೆಯಲ್ಲಿಯೂ ಮುಂದೆ ಬರಲು ಈ ಕಾರ್ಯಕ್ರಮ ಒಂದಿಷ್ಟು ಪ್ರೇರಣೆ ನೀಡುತ್ತಲಿದೆ ಎಂದು ಅವರು ವಿವರಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮೂಳೇಗಾಂವ ಸಮಾರಂಭ ಉದ್ಘಾಟಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಸೇಡಂನ ಉದ್ಯಮಿ ಮನೋಹರ ದೊಂತಾ, ಆರೋಗ್ಯ ಇಲಾಖೆಯ ಚಂದ್ರಕಾಂತ ಏರಿ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಗುರೂಜಿ ಡಿಗ್ರಿ ಕಾಲೇಜಿನ ಸಂಸ್ಥಾಪಕರೂ ಆದ ಜಿಲ್ಲಾ ಕಸಾಪ ಪ್ರತಿನಿಧಿ ಕಲ್ಯಾಣಕುಮಾರ ಶೀಲವಂತ, ಆದರ್ಶ ಶಿಕ್ಷಕಿ ವೆಂಕುಬಾಯಿ ರಜಪೂತ, ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗೀತಾ ಮೋರೆ ಸೇರಿದಂತೆ ಅನೇಕರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.