ಕಲಬುರಗಿ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರಕ್ಕೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಪಕ್ಷದ ರಾಜ್ಯ ನಾಯಕರು ಎಡವಿದ್ದಾರೆ ಎಂದು ಆರೋಪಿಸಿ ಮುನಿಸಿಕೊಂಡಿದ್ದ ವಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶಿವರಾಮ ಪವಾರ ಹಾಗೂ ಪ್ರಧಾನ ಕಾರ್ಯದರ್ಶಿ ರಾಹುಲ ಸಿಂಧಗಿ ಅವರು ಚುನಾವಣೆಯ ಸೋಲಿನ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಬಿಜೆಪಿ ಶುಕ್ರವಾರ ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠರಾವ ಪಾಟೀಲ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಈ ಇಬ್ಬರು ನಾಯಕರು, ಪಕ್ಷದ ಹೈಕಮಾಂಡ್ ತೆಗೆದುಕೊಂಡ ತೀರ್ಮಾನಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ ದಿನವೇ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿದ್ದೇವು. ಚಿತ್ತಾಪುರ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಮಲ ಭಾವುಟ ಹಾರಿಸಲು ಪೂರಕ ವಾತಾವರಣ ಸೃಷ್ಠಿ ಮಾಡಿದ್ದೇವು. ಆದರೆ ಕೊನೆಯ ಗಳಿಗೆಯಲ್ಲಿ ಹೈಕಮಾಂಡ್ ನಾಯಕರು ಪಕ್ಷಕ್ಕಾಗಿ ನಿಷ್ಠಾವಂತಿಕೆಯಿಂದ ದುಡಿಯುತ್ತಿರುವ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯನ್ನು ಕಡೆಗಣಿಸಿ ಚಿತ್ತಾಪರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದರು.
ಅತ್ಯಂತ ಸರಳವಾಗಿ ಗೆಲ್ಲಬಹುದಾಗಿದ್ದ ಚಿತ್ತಾಪುರ ಮತಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು. ಇದು ನಮಗೆ ತೀವ್ರ ಬೇಸರ ತರಿಸಿದೆ. ಪರಿಣಾಮ ನಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಮತ್ತು ಪಕ್ಷದ ಹಿತೈಷಿಯಾಗಿ ಸೇವೆ ಸಲ್ಲಿಸುತ್ತೇವೆ ಎಂದು ಪ್ರತ್ಯೇಕವಾಗಿ ಸಲ್ಲಿಸಿದ ತಮ್ಮ ರಾಜೀನಾಮೆ ಪತ್ರಗಳಲ್ಲಿ ಶಿವರಾಮ ಪವಾರ ಮತ್ತು ರಾಹುಲ್ ಸಿಂಧಗಿ ತಿಳಿಸಿದ್ದಾರೆ.