ಕಲಬುರಗಿ: ವಾಡಿಕೆಯಂತೆ ಜೂನ್ ಮೊದಲನೇ ವಾರದಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಮಳೆ ಮತ್ತು ಪ್ರವಾಹದಿಂದ ಉಂಟಾಗುವ ಅವಾಂತರ ತಡೆಗಟ್ಟಲು ಈಗಿನಿಂದಲೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಯಶವಂತ ವಿ. ಗುರುಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಮಳೆಗಾಲದಲ್ಲಿ ಯಾವುದೇ ರೀತಿಯ ಮಾನವ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ನಮ್ಮ ಮೊದಲ ಆದ್ಯತೆವಾಗಬೇಕು ಎಂದರು.
ಅಫಜಲಪೂರ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ನದಿ ದಂಡೆಯಲ್ಲಿ ವಾಸಿಸುವ ಗ್ರಾಮಸ್ಥರನ್ನು ಅಗತ್ಯವಿದ್ದಲ್ಲಿ ಸ್ಥಳಾಂತರಕ್ಕೆ ಬೇಕಾದ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಒಳಗೊಂಡ ರೆಸ್ಕ್ಯೂ ತಂಡಗಳನ್ನು ರಚಿಸಬೇಕು. ಬೋಟಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆಗಾಲ ಸಂದರ್ಭದಲ್ಲಿ ಉದ್ಬವಹಿಸಬಹುದಾದ ಸಾಂಕ್ರಾಮಿಕ ರೋಗಗಳು ಹರಡದಂತೆ ವಿಶೇಷವಾಗಿ ಹಾವು ಕಚ್ಚಿದಲ್ಲಿ ಅದರ ಚಿಕಿತ್ಸೆಗೆ ಬೇಕಾಗುವ ಅಗತ್ಯ ಔಷಧಿಗಳನ್ನು ಪಿ.ಎಚ್.ಸಿ.ಗಳಲ್ಲಿ ದಾಸ್ತಾನು ಮಾಡಿಕೊಳ್ಳಬೇಕು ಎಂದರು.
ಇನ್ನು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿಯೇ ಠಿಕಾಣಿ ಹೂಡಬೇಕು ಮತ್ತು ಗ್ರಾಮದ ನಕ್ಷೆ, ಜನಸಂಖ್ಯೆ, ಜಾನುವಾರಿಗಳ ಸಂಖ್ಯೆ ಹಾಗೂ ಗ್ರಾಮದಲ್ಲಿ ಬೆಳೆಯಲಾದ ಬೆಳೆ ವಿವರ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ಇಟ್ಟುಕೊಳ್ಳಬೇಕು ಎಂದರು.
ಕಲಬುರಗಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಪೈಪಲೈನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ಪರೀಕ್ಷಿಸಬೇಕು. ಎಲ್ಲಾದರು ಸೋರಿಕೆ ಇದಲ್ಲಿ ಕೂಡಲೆ ದುರಸ್ತಿ ಮಾಡಬೇಕು. ಕುಡಿಯುವ ನೀರಿನೊಂದಿಗೆ ಚರಂಡಿ ಸೇರದಂತೆ ಎಚ್ಚರ ವಹಿಸಬೇಕು. ಜಿಲ್ಲೆಯ ಎಲ್ಲಾ ಪೌರ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತಿಗಳಲ್ಲಿ ನೀರು ಸರಾಗವಾಗಿ ಹೋಗಲು ಚರಂಡಿಗಳನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು. ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳಿಗೆ ಹತ್ತಿಕೊಂಡು ಗಿಡಗಳಿದಲ್ಲಿ ಅದನು ಭಾಗಶ ಕತ್ತರಿಸಿ ವಿದ್ಯುತ್ ಅವಘಡವಾಗದಂತೆ ನೋಡಿಕೊಳ್ಳಬೇಕು. ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ಕೂಡಲೆ ಬದಲಾಯಿಸಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ತಿಳಿಸಿದರು.
ಕಲಬುರಗಿ ಜಿಲ್ಲೆಯಾದ್ಯಂತ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕಗಳನ್ನು ಸ್ಚಚ್ಚಗೊಳಿಸಬೇಕು. ಕಳೆದ ವರ್ಷ ಚಿತ್ತಾಪೂರ ತಾಲೂಕಿನ ದಂಡೋತಿ ಮತ್ತು ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದಾದ ಅವಾಂತರ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ರಾಜಿ ಇಲ್ಲ ಎಂದ ಜಿಲ್ಲಾಧಿಕಾರಿಗಳು, ಕಲುಷಿತ ನೀರು ಸೇವನೆಯಿಂದ ಯಾರಾದರು ಬಳಲುತ್ತಿದ್ದಲ್ಲಿ ಕೂಡಲೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ಡಿ.ಎಚ್.ಓ. ಡಾ.ರಾಜಶೇಖರ ಪಾಟೀಲ ಅವರಿಗೆ ನಿರ್ದೇಶನ ನೀಡಿದರು.
*ಸಂತ್ರಸ್ತರಿಗೆ 24 ಗಂಟೆಯಲ್ಲಿಯೇ ಪರಿಹಾರ:*
ಮಳೆ ಮತ್ತು ಪ್ರವಾಹದಿಂದ ಮನೆ ಮತ್ತು ಜೀವ ಹಾನಿ ಪ್ರಕರಣದಲ್ಲಿ 24 ಗಂಟೆ ಒಳಗೆ ತ್ವರಿತವಾಗಿ ಸಂತ್ರಸ್ತರ ಮನೆ ಬಾಗಿಲಿಗೆ ಹೋಗಿ ಪರಿಹಾರ ನೀಡಬೇಕು. ಸಂತ್ರಸ್ತರಿಗೆ ನೀಡಲಾದ ಪರಿಹಾರದ ಕುರಿತ ವಿವರವನ್ನು ಆಯಾ ಗ್ರಾಮದ ಚಾವಡಿ ಮತ್ತು ಪಟ್ಟಣಗಳ ವಾರ್ಡ್‍ವಾರು ಸಾರ್ವಜನಿಕವಾಗಿ ಪ್ರಕಟಿಸಬೇಕು. ಬೆಳೆ ಪರಿಹಾರ ಪ್ರಕರಣದಲ್ಲಿ ಗ್ರಾಮ ಲೆಕ್ಕಿಗರು ಕಚೇರಿಯಲ್ಲಿ ಕುಳಿತ ಮಾಹಿತಿ ತಯ್ಯಾರಿಸದೆ ಕ್ಷೇತ್ರಕ್ಕೆ ಬೇಟಿ ನೀಡಿ ವಾಸ್ತವ ಮಾಹಿತಿ ನೀಡಬೇಕು. ಹಿಂದಿನ ವರ್ಷದ ತಪ್ಪು ಮರುಕಳಿಸಿದಿರೆ ಅಂತಹ ಗ್ರಾಮ ಲೆಕ್ಕಗರನ್ನು ಮುಲಾಜಿಲ್ಲದೆ ಸಸ್ಪೆಂಡ್ ಮಾಡಲಾಗುವುದು. ಪÀರಿಹಾರ ವಿತರಣೆಯಲ್ಲಿ ಯಾವುದೇ ಪಕ್ಷಪಾತ ಸಹಿಸುವುದಿಲ್ಲ. ಅರ್ಹರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕೆಂದರು.
*ಶಿಥಿಲ ಕಟ್ಟಡಗಳ ದುರಸ್ತಿ ಕೈಗೊಳ್ಳಿ:*
ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಕಟ್ಟಡಗಳು ಮಳೆಯಿಂದ ಸೋರಿಕೆ ಆಗುತ್ತಿದ್ದಲ್ಲಿ ಕೂಡಲೆ ಅಂತಹ ಕಟ್ಟಡಗಳನ್ನು ಗುರುತಿಸಿ ದುರಸ್ತಿ ಕೈಗೊಳ್ಳಬೇಕು. ವಿಪತ್ತು ಪರಿಹಾರ ನಿಧಿಯಲ್ಲಿ ಇದಕ್ಕೆ ಅನುದಾನ ನೀಡಲಾಗುವುದು. ಇದೇ ರೀತಿ ಖಾಸಗಿ ಶಾಲೆ ಮೇಲೆಯೂ ನಿಗಾ ವಹಿಸಬೇಕು. ಮೇಲ್ಚಾವಣಿ ಕುಸಿದು ಮಕ್ಕಳಿಗೆ ಹಾನಿ ಪ್ರಕರಣ ಎಲ್ಲಿಯೂ ವರದಿಯಾಗಬಾರದು. ಕೂಡಲೆ ಎಚ್ಚೆತ್ತುಕೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇದೇ ರೀತಿಯ ಅಂಗನವಾಡಿ ಕಟ್ಟಡಗಳ ಬಗ್ಗೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಗಿರೀಶ್ ಡಿ. ಬದೋಲೆ, ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಆಯುಕ್ತೆ ಮಮತಾ ಕುಮಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.