ಕಲಬುರಗಿ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಅವರು ಶನಿವಾರ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮಕ್ಕೆ ಭೇಟಿ ನೀಡಿ ಇತ್ತೀಚೆಗೆ ಭೀಮಾ ನದಿ ಪ್ರವಾಹದ ಹಿನ್ನೀರಿನಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.
ಪ್ರವಾಹಕ್ಕೆ ತೊಗರಿ, ಕಬ್ಬು ಮತ್ತು ಹತ್ತಿ ಬೆಳೆಗಳು ಹಾಳಾದ ಹೊಲಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು ಇಲ್ಲಿ ಬೆಳೆ ಹಾನಿಯಾಗಿದ್ದು ತಮ್ಮ ಗಮನಕ್ಜೆ ಬಂದಿದೆ. ಪ್ರವಾಹದಿಂದ ಬೆಳೆ ಹಾನಿಯಾಗಿರುವ ಪ್ರದೇಶದಲ್ಲಿ ಕೂಡಲೇ ಬೆಳೆ ಸಮೀಕ್ಷೆ ಕಾರ್ಯ ಚುರುಕುಗೊಳಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಅರ್.ವೆಂಕಟೇಶ ಕುಮಾರ ಮಾತನಾಡಿ ಜಿಲ್ಲೆಯಾದ್ಯಂತ ಈಗಾಗಲೇ ಬೆಳೆ ಹಾನಿ ಕುರಿತಂತೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಜೇವರ್ಗಿ ತಾಲೂಕಿನಲ್ಲಿ ಖಾರಿಫ್‌ನಲ್ಲಿ ವಾಡಿಕೆಗಿಂತ ಶೇ.೨೫ರಷ್ಟು ಮಳೆ ಕೊರತೆಯಾಗಿದೆ. ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹಕ್ಕೆ ತುತ್ತಾಗಿ ಮನೆ, ಬೆಳೆ ಹಾನಿಗೊಳಗಾದರೆ ತಾಲೂಕಿನ ಇನ್ನು ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಎಸಿಎಸ್ ಅವರ ಗಮನಕ್ಕೆ ತಂದರು.
ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ್ ಸುಗೂರ್ ಅವರು ಪ್ರವಾಹದಲ್ಲಿ ಬೆಳೆ ಹಾನಿಯಾದ ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ೬೮೦೦ ರೂ., ನೀರಾವರಿ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ೧೩೬೦೦ ರೂ. ಹಾಗೂ ಪ್ರತಿ ಹೆಕ್ಟೇರ್ ಪ್ಲಾಂಟೇಶನ್ ಕ್ರಾಪ್ ಬೆಳೆಗಳಿಗೆ ೧೮೦೦೦ ರೂ.ಗಳಂತೆ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ಬೆಳೆ ವಿಮೆ ಪರಿಹಾರವು ವಿತರಿಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ನೆಲೋಗಿ ಜಿಲ್ಲಾ ಪಂಚಾಯತ್ ಸದಸ್ಯೆ ದೇವಕಿ ಚನ್ನಮಲ್ಲಯ್ಯ ಅವರು ಪ್ರವಾಹದಿಂದಾಗಿ ನೆಲೋಗಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ೧೦ ಸಾವಿರ ಹೆಕ್ಟೇರ್ ಪ್ರದೇಶವು ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸೂಕ್ತ ಬೆಳೆ ವಿಮೆ ಹಾಗೂ ಪರಿಹಾರವನ್ನು ನೀಡಬೇಕೆಂದು ಎ.ಸಿ.ಎಸ್. ಇ.ವಿ.ರಮಣರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸ್ಥಳೀಯ ಗ್ರಾಮಸ್ಥರು ಮಾತನಾಡಿ ಭೀಮಾ ಪ್ರವಾಹದಿಂದ ನದಿ ದಂಡೆಯಲ್ಲಿ ಬೆಳೆಯಲಾದ ಬಹುತೇಕ ಬೆಳೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಬಗ್ಗೆ ಅರಿವಿಲ್ಲದೆ ಗ್ರಾಮದ ಬಹುತೇಕ ರೈತರು ಬೆಳೆ ವಿಮೆ ಮಾಡಿಸಿಲ್ಲ. ಹೀಗಾಗಿ ಬೆಳೆ ವಿಮೆ ಮಾಡಿಸದ ರೈತರಿಗೂ ಸಹ ಸೂಕ್ತ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಕಲ್ಲೂರ್ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಭೇಟಿ:- ಇದಕ್ಕು ಮುನ್ನ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಅವರು ಕಲ್ಲೂರ(ಕೆ) ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಭೇಟಿ ನೀಡಿದರು. ಬ್ಯಾರೇಜ್‌ನ ಕೊನೆಯಲ್ಲಿ ನೀರು ಹರಿಯುತ್ತಿರುವುದನ್ನು ಗಮನಿಸಿದ ಅವರು ಕೂಡಲೆ ಇಲ್ಲಿ ಬಂಡ್ ನಿರ್ಮಿಸಿ ನೀರು ತಡೆಯುವುದಲ್ಲದೆ ಬ್ಯಾರೇಜಿನಲ್ಲಿ ನೀರು ಶೇಖರಣೆಗೆ ಕ್ರಮವಹಿಸಿ. ಇದಲ್ಲದೆ ಬ್ಯಾರೇಜಿನಿಂದ ಚಿಣಮಗೇರಾಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ಕೂಡಲೆ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಕೆ.ಬಿ.ಜೆ.ಎನ್.ಎಲ್. ರಾಂಪೂರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ ಅವರಿಗೆ ಸೂಚನೆ ನೀಡಿದರು. ಕೂಡು ರಸ್ತೆಯನ್ನು ೩.೬೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಇಇ ಬಸವರಾಜ ಕುಂಬಾರ್ ಅವರು ಎ.ಸಿ.ಎಸ್ ಇ.ವಿ.ರಮಣರೆಡ್ಡಿ ಅವರ ಗಮನಕ್ಕೆ ತಂದರು.
ಹರವಾಳನಲ್ಲಿ ಪರಿಹಾರ ಚೆಕ್ ವಿತರಣೆ:- ಭೀಮಾ ನದಿ ದಂಡೆಯಲ್ಲಿರುವ ತಾಲೂಕಿನ ಹರವಾಳ ಗ್ರಾಮದಲ್ಲಿ ಪ್ರವಾಹದಿಂದ ಮನೆಗೆ ನೀರು ನುಗ್ಗಿ ಮನೆಯ ಆಸ್ತಿಪಾಸ್ತಿ ಹಾಗೂ ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರವು ಘೋಷಿಸಿರುವ ಹೆಚ್ಚುವರಿ ೬೮೦೦ ರೂ.ಗಳ ಪರಿಹಾರದ ಮೊತ್ತದ ಚೆಕ್ಕುಗಳನ್ನು ಎ.ಸಿ.ಎಸ್. ಇ.ವಿ.ರಮಣರೆಡ್ಡಿ ಅವರು ಸಂತ್ರಸ್ತರಾದ ಭೀಮರಾಯ ತಂ. ಲಕ್ಷಣ, ಬಸವರಾಜ ತಂ ನಾಗಪ್ಪ, ಸಿದ್ರಾಮ ತಂ. ರಾಮು, ನಾಗಮ್ಮ ಗಂ. ಮಲ್ಲೇಶ, ಶರಣಪ್ಪ ಚಂದ್ರಪ್ಪ, ದೇವಿಂದ್ರಪ್ಪ ಅಂಬಣ್ಣಾ, ಶಾಂತರಾಯ ಭೀಮರಾಯ, ಹಣಮಂತ ಭೀಮಶಾ, ಬಲಭೀಮ ತಂ.ಅಂಬಣ್ಣಾ ಮತ್ತು ಅಂಬ್ರೇಶ್ ತಂ. ಮಾನಪ್ಪ ಅವರಿಗೆ ವಿತರಿಸಿದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಮಾತನಾಡಿ ಎಸ್.ಡಿ.ಆರ್.ಎಫ್./ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಈಗಾಗಲೇ ಈ ಸಂತ್ರಸ್ತರಿಗೆ ೩೮೦೦ ರೂ. ಪರಿಹಾರ ನೀಡಲಾಗಿದ್ದು, ಈಗ ಹೆಚ್ಚುವರಿ ಮೊತ್ತ ೬೨೦೦ ರೂ. ನೀಡುವ ಮೂಲಕ ಒಟ್ಟಾರೆ ಪ್ರತಿ ಕುಟುಂಬಕ್ಕೆ ತಲಾ ೧೦ ಸಾವಿರ ರೂ.ಗಳಂತೆ ಪರಿಹಾರ ಒದಗಿಸಲಾಗಿದೆ. ಇಲ್ಲಿನ ಜನರಿಗೆ ಶಾಶ್ವತ ಮನೆ ಕಟ್ಟಿಸಿಕೊಳ್ಳಲು ಕ್ರಮ ವಹಿಸುವಂತೆ ಜೇವರ್ಗಿ ತಹಶೀಲ್ದಾರ ಸಿದ್ಧರಾಯ ಭೋಸಗಿ ಅವರಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು ಪ್ರವಾಹ ಈಗ ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಡಾ. ಬಿ.ಗೋಪಾಲಕೃಷ್ಣ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ, ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರ, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಶರಣಬಸಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.