ಕಲಬುರಗಿ: ಅವೈಜ್ಞಾನಿಕವಾಗಿರುವ ಹೊಸ ಸ್ಲ್ಯಾಬ ಪದ್ದತಿಯನ್ನು ಕೈ ಬಿಟ್ಟು, ಹಳೆಯ ಪದ್ದತಿ ಮುಂದುವರೆಸಿ. ಪ್ರತಿ ಯೂನಿಟಿಗೆ 70 ಪೈಸೆ ಹೆಚ್ಚಿಸಿರುವುದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ ನಗರದ ವಿದ್ಯುತ್ ಸರಬರಾಜು ಕಂಪನಿಯ ಮುಂದೆ ಪ್ರತಿಭಟನೆ ನಡೆಸಿ ನೂತನ ಸರಕಾರಕ್ಕೆ ಆಗ್ರಹಿಸಿದೆ.
ಅವೈಜ್ಞಾನಿಕ ಹಾಗೂ ಹಗಲು ದರೋಡೆಯ ಹೊಸ ಸ್ಲ್ಯಾಬ ಪದ್ದತಿಯಿಂದಾಗಿ ಜನಸಾಮಾನ್ಯರು ಬಹಳ ಆರ್ಥಿಕ ಹೊರೆಯನ್ನು ಹೊರುವಂತಾಗಿದೆ. ಹಳೆಯ ಸ್ಲ್ಯಾಬ ಪ್ರಕಾರ ಮೊದಲ 50 ಯೂನಿಟ್ ಬಳಕೆ ಮಾಡುವವರಿಗೆ ರೂ. 4.10 ನಿಗದಿ ಮಾಡಲಾಗಿತ್ತು. ನಂತರದ 51 ರಿಂದ 100 ಯೂನಿಟ್‍ಗೆ ರೂ. 5.60 ಹಾಗೂ 101 ರಿಂದ 157 ಯೂನಿಟ್‍ವರೆಗೆ ರೂ. 7.15 ಹಾಗೂ 157 ಯೂನಿಟ್‍ಗಿಂತ ಹೆಚ್ಚು ಬಳಸಿದರೆ ರೂ. 8.20 ಇತ್ತು. ಆದರೆ ಈಗ ಈ ನಾಲ್ಕು ಮಾನದಂಡಗಳನ್ನು ರದ್ದುಗೊಳಿಸಿ ಕೇವಲ ಎರಡೇ ಮಾನದಂಡಗಳನ್ನು ಮಾಡಲಾಗಿದೆ.
ಹೊಸ ಮಾನದಂಡ ಪ್ರಕಾರ ಮೊದಲ 100 ಯೂನಿಟ್ ವರೆಗೂ ರೂ. 4.75 ಹಾಗೂ 100 ಯೂನಿಟ್ ಗಿಂತ ಹೆಚ್ಚು ಬಳಸಿದರೆ ಅವರಿಗೆ ರೂ. 7.00 ನಿಗದಿ ಪಡಿಸಿದ್ದಾರೆ. ಒಂದು ವೇಳೆ ಒಬ್ಬ ಗ್ರಾಹಕ 101 ಯೂನಿಟ ಬಳಸಿದರೂ ಅವರು ಒಟ್ಟು ಯೂನಿಟಿಗೆ ರೂ. 7.00 ರಂತೆ ಪಾವತಿಸಬೇಕು. ಇದು ಜನರಿಗೆ ಬಹಳ ಹೊರೆಯಾಗಿದೆ. ಇದಲ್ಲದೆ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಏಪ್ರಿಲ್ 1 ರಿಂದಲೇ ಜಾರಿಯಾಗುವಂತೆ ಪ್ರತಿ ಯೂನಿಟಿಗೆ 70 ಪೈಸೆ ದರ ಹೆಚ್ಚಿಸಿರುವುದನ್ನು ಹಾಗೂ ವಿದ್ಯುತ್ ಬಳಕೆಯ ನಿಗದಿತ ಶುಲ್ಕವನ್ನು ರೂಪಾಯಿ 50 ಇದ್ದದ್ದನ್ನು ರೂಪಾಯಿ 70ಕ್ಕೆ ಹೆಚ್ಚಿಸಿರುವುದಕ್ಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್. ವಿ. ದಿವಾಕರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರು, ರೈತರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ತತ್ತರಿಸುತ್ತಿದ್ದು, ಈ ವಿದ್ಯುತ್ ದರ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ಕಡೆ ಜನಸಾಮಾನ್ಯರಿಗೆ 200 ಯೂನಿಟ್‍ವರೆಗೂ ಉಚಿತ ಎಂದು ಹೇಳಿ ಇನ್ನೊಂದೆಡೆ ವಿದ್ಯುತ್ ದರ ಏರಿಸಿರುವುದು ಇಬ್ಬಗೆ ನೀತಿಯಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯ ಮತ್ತು ಅಂಗಡಿಗಳನ್ನು ಹೊಂದಿದವರಿಗೆ ಇದು ನುಂಗಲಾರದ ತುತ್ತಾಗಿದೆ.
ಎಲ್ಲಾ ಜನರಿಗೂ ಅವಶ್ಯವಾಗಿ ಬೇಕಾಗಿರುವ ವಿದ್ಯುತ್ ಶಕ್ತಿಯೂ ಈಗ ಜನರ ಜೀವನಾವಶ್ಯಕತೆಗಳಲ್ಲಿ ಒಂದಾಗಿದೆ. ಇದರ ಬೆಲೆ ಏರಿಕೆ ಜನರ ಮೇಲೆ ಹೊರೆಯಾಗಿದೆ. ನೂತನ ರಾಜ್ಯ ಸರಕಾರವು ಇದರ ಬಗ್ಗೆ ಮೌನವಾಗಿದ್ದು, ಇದು ನಮ್ಮ ಸರಕಾರದ ನಿರ್ಣಯವಲ್ಲ ಎಂದು ನೆಪ ಹೇಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಹಳೆಯ ಜನವಿರೋಧಿ ನೀತಿಗಳನ್ನು ಪರಿಷ್ಕರಿಸುತ್ತಿರುವ ತಮ್ಮ ಸರಕಾರವು ವಿದ್ಯುತ್ ದರ ಏರಿಕೆ ಏಕೆ ಪರಿಷ್ಕರಿಸಬಾರದು? ಕೂಡಲೇ ಈ ವಿಷಯವನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಹೊಸ ಸ್ಲ್ಯಾಬ ಪದ್ದತಿಯನ್ನು ಕೈಬಿಡಬೇಕು ಹಾಗು ವಿದ್ಯುತ್ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಈ ವೇಳೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ವಿ. ನಾಗಮ್ಮಾಳ, ರಾಮಣ್ಣ ಎಸ್. ಇಬ್ರಾಹಿಂಪೂರ, ಗಣಪತರಾವ ಕೆ. ಮಾನೆ. ಎಸ್.ಎಂ. ಶರ್ಮಾ, ವಿ.ಜಿ. ದೇಸಾಯಿ. ಮಹೇಶ ಎಸ್.ಬಿ. ಜಗನ್ನಾಥ ಎಸ್.ಹೆಚ್., ಸೇರಿದಂತೆ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಭಾಗವಹಿಸಿದ್ದರು.