ಕಲಬುರಗಿ: ನೂರು ವರ್ಷದ ಹಿಂದಯೇ ಭಾರತದಲ್ಲಿ ಮೊಬೈಲ್ ನ ಆವಿಷ್ಕಾರವಾಗಿತ್ತು ಎಂದು ಕಂಪ್ಯೂಟರ್ ಗೆ ಕನ್ನಡ ಭಾಷೆ ಕಲಿಸಿದ ಹಾಗೂ ಬಾಹ್ಯಕಾಶ ಮಾಜಿ ವಿಜ್ಞಾನಿ ಪ್ರೊ. ಬಿ.ಎ.ಪಾಟೀಲ ಪ್ರತಿಪಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ದಕ್ಷಿಣ ವಲಯದ ಸಹಯೋಗದೊಂದಿಗೆ ಶನಿವಾರ ವಿವಿಧ ಶಾಲೆಗಳಲ್ಲಿ ಏರ್ಪಡಿಸಲಾದ `ನಮ್ಮೊಳಗಿದೆ ಗೆಲುವಿನ ಬೆಳಕು’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತದ ವಿಜ್ಞಾನ ಕ್ಷೇತ್ರ ಅತ್ಯಂತ ಶ್ರೇಷ್ಠವಾಗಿದೆ. ನಮ್ಮ ದೇಶದ ಜ್ಞಾನ ಪಡೆದುಕೊಂಡು ಪಾಶ್ಚಾತ್ಯರು ಮುಂದುವರೆಯುತ್ತಿದ್ದಾರೆ.
ವಿಜ್ಞಾನಿಗಳನ್ನು ಸದ್ಬಳಕೆ ಮಾಡಿಕೊಂಡರೆ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಸಂಶೋಧನೆಗೆ ಸೌಲಭ್ಯಗಳ ಅಗತ್ಯವಿಲ್ಲ. ಹುಚ್ಚು ಮನಸ್ಸು ಬೇಕು ಎಂದರು. ಜ್ಞಾನ ವಿಜ್ಞಾನದ ಜತೆ ಸುಜ್ಞಾನ ಅಗತ್ಯ. ವಿಜ್ಞಾನಿಗಳು ದೇವರನ್ನು ನಂಬುತ್ತಾರೆ. ಆದರೆ ಮೂಢನಂಬಿಕೆಯನ್ನು ವಿರೋಧಿಸುತ್ತಾರೆ. ಸಾಧನೆ ಮಾಡಲು ವಿದ್ಯಾರ್ಥಿಗಳ ಪರಿಶ್ರಮ ಅಗತ್ಯ. ತಾವು ಕಂಡ ಕನಸು ತಾವೇ ನನಸಾಗಿಸಿಕೊಳ್ಳಬೇಕು. ಇನ್ನೊಬ್ಬರ ಮೇಲೆ ಅವಲಂಬನೆಯಾಗಬಾರದು. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಚಿಂತನೆ ಮಾಡಬೇಕಿದ್ದು, ಕೇವಲ ಚಿಂತನೆಯಾಗಿರದೇ ಅನ್ವೇóನೆಯ ಹಾದಿಯಲ್ಲಿ ನಡೆಯಬೇಕು. ಒಂದು ಸಣ್ಣ ಚಿಂತನೆ ದೊಡ್ಡ ಪರಿವರ್ತನೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟ ಅವರು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ ಎಂದರು.
ಸೂರ್ಯಕಾಂತ ಜಮಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್.ಅಂಡಗಿ, ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಮಾತನಾಡಿದರು. ರಾಜೇಂದ್ರ ಮಾಡಬೂಳ, ಬಸ್ವಂಣತರಾಯ ಕೋಳಕೂರ, ಹೆಚ್.ಎಸ್.ಬರಗಾಲಿ, ಶಿವಕುಮಾರ ಸಿ.ಎಚ್., ಮಲ್ಲಿನಾಥ ಸಂಗಶೆಟ್ಟಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಇತರರು ಪಾಲ್ಗೊಂಡಿದ್ದರು.