ವಾಡಿ: ದೈಹಿಕ ಸದೃಢತೆಯೊಂದಿಗೆ ವ್ಯಕ್ತಿಯ ಬೆಳವಣಿಗೆಗೆ ಯಾವುದು ಅಗತ್ಯವಿದೆಯೋ ಅದನ್ನು ನಾವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕಿದೆ. ಯಾವುದು ಅಗತ್ಯವಿಲ್ಲವೋ ಅದನ್ನು ತಿರಸ್ಕರಿಸಬೇಕು. ಯೋಗದ ಚಿಂತನೆಗಳು ದೇಶದ ಆಸ್ತಿಯಾಗಿದ್ದು, ಇವು ಯಾವುದೇಯೊಬ್ಬ ವ್ಯಕ್ತಿಯ ಸ್ವತ್ತಲ್ಲ ಎಂದು ಯೋಗ ಆಸಕ್ತ ಶಿಕ್ಷಕ ಆರ್.ಕೆ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಪುರಸಭೆ ಸಹಯೋಗದೊಂದಿಗೆ ಪತಂಜಲಿ ಯೋಗ ಸಮಿತಿ ಮತ್ತು ಬೆಳಗಿನ ಬಳಗ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ರೋಗ ಬರುವ ಮುಂಚೆ ಯೋಗ ಅಭ್ಯಾಸ ಮಾಡಬೇಕು. ರೋಗ ಬಂದ ನಂತರ ಯೋಗ ಮಾಡಿದರೆ ರೋಗ ನಿಯಂತ್ರಣ ಕಷ್ಟಸಾಧ್ಯ. ಆದಷ್ಟು ನಾವು ಕ್ರೀಡೆಗಳನ್ನು ಮತ್ತು ಯೋಗಾಸನಗಳನ್ನು ಉಳಿಸಿಕೊಳ್ಳಬೇಕು. ಸಮಾಜಿಕ ಚಿಂತನೆಗಳಲ್ಲಿ ತೊಡಗಿಕೊಂಡವರು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯತ್ತಲೂ ತುಸು ಗಮನಹರಿಸಬೇಕು ಎಂದರು.
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ, ಯೋಗಾಭ್ಯಾಸ ಎಂಬುದು ಋಷಿಮುನಿಗಳ ಕಾಲದಿಂದಲೂ ಇದೆ. ಯೋಗಾಸನಗಳನ್ನು ಮಾಡುವುದರಿಂದ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ದೈಹಿಕ ಚೈತನ್ಯ ಪ್ರಾಪ್ತಿಯಾಗುತ್ತದೆ. ರೋಗ ಮುಕ್ತ ಜೀವನ ನಡೆಸಲು ಯೋಗ ರಾಮಬಾಣವಾಗಿದೆ ಎಂದು ವಿವರಿಸಿದರು.
ಪತಂಜಲಿ ಯೋಗ ಶಿಕ್ಷಕೀಯರಾದ ಅರ್ಚನಾ ಮುತ್ತಗಿ, ಸಂಗೀತಾ ಜ್ಯೋಷಿ, ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಗೀತಾ ಪಾಟೀಲ, ಮುಖಂಡರಾದ ಶಿವರಾಮ ಪವಾರ, ಬಸವರಾಜ ಪಂಚಾಳ, ಹೇಮಂತ ಬಿ.ಕೆ, ಹರಿ ಗಲಾಂಡೆ, ವಿ.ಕೆ.ಕೆದಿಲಾಯ, ಜಯದೇವ ಜೋಗಿಕಲ್‍ಮಠ, ಭೀಮರಾವ ದೊರೆ, ವಿಠ್ಠಲ ನಾಯಕ, ಕಾಶೀನಾಥ ಶೆಟಗಾರ, ಪ್ರಕಾಶ ಪೂಜಾರಿ, ಕಿಶನ ಜಾಧವ, ಅರ್ಜುನ ಕಾಳೇಕರ, ಅಮೃತಪ್ಪ ದಿಗ್ಗಾಂವ, ಮಲ್ಲಯ್ಯಸ್ವಾಮಿ ಮಠಪತಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ಮಲ್ಲಿಕಾರ್ಜುನ ಕರಗರ, ಸತೀಶ ಸಾವಳಗಿ, ಅಶೋಕ ಕಾನಕುರ್ತೆ, ಚಂದ್ರಶೇಖರ ಬೆಣ್ಣೂರ ಪಾಲ್ಗೊಂಡಿದ್ದರು.