ಚಿತ್ತಾಪುರ: ಚಿತ್ತಾಪುರದಿಂದ ದಂಡಗುಂಡ ಗ್ರಾಮಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ಸಹಿತ ವಾಹನವನ್ನು ಜಪ್ತಿ ಮಾಡಲಾಗಿದ್ದು, ಚಾಲಕನನ್ನು ಶುಕ್ರವಾರ ಬಂಧಿಸಲಾಗಿದೆ.
ಪಟ್ಟಣದ ಭುವನೇಶ್ವರಿ ವೃತ್ತದ ಹತ್ತಿರ ಅಕ್ಕಿ ತುಂಬಿಕೊಂಡು ಪಿಕಪ್ ವಾಹನ ಸಾಗುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಹೀರಾಸಿಂಗ್ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು. ಆಗ 732,850 ಮೌಲ್ಯದ 21.90 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದರು.
ವಾಹನದ ಚಾಲಕ ದಂಡಗುಂಡ ಗ್ರಾಮದ ಮಲ್ಲೇಶಿ ಬಸ್ಸಪ್ಪ ಎಂಬುವರು ವಿವಿಧೆಡೆ ಅಕ್ಕಿ ಸಂಗ್ರಹಿಸಿಕೊಂಡು ದಂಡಗುಂಡ ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದರು. ವಾಹನ ತಡೆದು ವಿಚಾರಿಸಿದಾಗ ಅಕ್ಕಿ ಸಾಗಣೆ ಅಕ್ರಮ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಡಗುಂಡ ಗ್ರಾಮದ ಬಸ್ಸುಗೌಡ ಎಂಬುವರು ಅಕ್ರಮವಾಗಿ ಮಾರಾಟ ಮಾಡಲೆಂದು ತರಿಸಿಕೊಳ್ಳುತ್ತಿದ್ದರು. ದಂಡಗುಂಡ ಗ್ರಾಮದಿಂದ ಬೇರೆಡೆಗೆ ಅಕ್ಕಿ ಮಾರಾಟ ದಂಧೆ ನಡೆಯುತ್ತಿತ್ತು. ಅವರ ಸೂಚನೆಯಂತೆ ವಾಹನ ಚಾಲಕ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಚೇತನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಅಹಾರ ಇಲಾಖೆಯ ನಿರೀಕ್ಷಕ ಹೀರಾಸಿಂಗ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.