ಕಲಬುರಗಿ: ತಾಲೂಕಿನ ಫಿರೋಜಾಬಾದ, ಹೊನ್ನಕಿರಣಗಿ, ನದಿಸಿಣ್ಣೂರ ಗ್ರಾಮಗಳ ಒಟ್ಟು 1,600 ಎಕರೆ ಜಮೀನನ್ನು ಕಲ್ಲಿದ್ದಲು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ಆದರೆ ಅದೇ ಜಾಗದಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. ಯಾವ ಉದ್ದೇಶಕ್ಕೆ ಖರೀದಿಸಲಾದ ಭೂಮಿಯನ್ನು ಅದೇ ಯೋಜನೆಗೆ ಬಳಕೆಯಾಗಬೇಕು ಎಂದು ಫರಹತಾಬಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಶಾಖ ಪಟೇಲ್ ವಕೀಲರು ಸಂಸದ ಡಾ. ಉಮೇಶ ಜಾಧವ ಅವರಿಗೆ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆ ಆಗಿರಬಹುದು, ಆದರೆ ರಾಜ್ಯ ಸರ್ಕಾರ ಮೂಲಸೌಕರ್ಯ ಒದಗಿಸುತ್ತಿದ್ದು, ಈ ಹಿಂದೆ ಕಲ್ಲಿದಲ್ಲು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಭೂಮಿ ಭೂಸ್ವಾಧೀನಪಿಡಿಸಿಕೊಳ್ಳಲಾಗಿತ್ತು. ಈಗ ಮೆಗಾ ಜವಳಿ ಪಾರ್ಕ್‍ಗೆ ಮುಂದಾಗಿರುವುದು ಸರಿಯಾದರೂ ಸಹ ಭೂಸಂತ್ರಸ್ತರ ಕುಟುಂಬಕ್ಕೊಂದು ಖಾಯಂ ನೌಕರಿ ನೀಡಬೇಕು. ಈ ಬಗ್ಗೆ ಲಿಖಿತ ಭರವಸೆ ನೀಡಬೇಕು. ತುರ್ತು ಪರಿಸ್ಥಿತಿ ಕಲಂ ಅಡಿ 210 ರಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನಪಡಿಕೊಂಡು ಇಲ್ಲಿವರೆಗೆ ವಿದ್ಯುತ್ ಸ್ಥಾವರ ನಿರ್ಮಿಸಿಲ್ಲ. ಹೀಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನು ಹೆಚ್ಚಿನ ಪರಿಹಾರ ಸಿಗುವಂತಾಗಬೇಕು.
ಸಂಸದ ಡಾ. ಉಮೇಶ ಜಾಧವ ಅವರು ಕೇಂದ್ರ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ಜವಳಿ ಪಾರ್ಕ್ ನಿರ್ಮಿಸುವಂತೆ ಒತ್ತಾಯಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಸಂಸದರು ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚಿಸದೆ, ಸ್ಪಂದಿಸದೆ ಏಕಾಏಕಿ ಜವಳಿ ಪಾರ್ಕ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಒಟ್ಟಿನಲ್ಲಿ ಭೂಸಂತ್ರಸ್ತರಿಗೆ ಸದ್ಯದ ಮಾರುಕಟ್ಟೆ ದರದಂತೆ ಹೆಚ್ಚಿನ ಭೂಪರಿಹಾರ ಹಾಗೂ ಪ್ರತಿ ರೈತರಿಗೆ ಕಡ್ಡಾಯವಾಗಿ ಖಾಯಂ ನೌಕರಿ ನೀಡುವ ಬಗ್ಗೆ ಲಿಖಿತ ಭರವಸೆ ಕೊಡಬೇಕು. ಇಲ್ಲದಿದ್ದರೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ರೈತರೊಂದಿಗೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.