ಕಲಬುರಗಿ: ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಅವರು ಶುಕ್ರವಾರ ಜೇವರ್ಗಿ ತಾಲೂಕಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜೇವರ್ಗಿ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ತಾ.ಪಂ. ಇ.ಓ ಮತ್ತು ಪಿ.ಡಿ.ಓ ಗಳೊಂದಿಗೆ ಸಭೆ ನಡೆಸಿದ ಅವರು, ನರೇಗಾ ಯೊಜನೆಯಡಿ ಮಾನವ ದಿನ ಸೃಜನೆ, ಅಮೃತ ಸರೋವರ ಪ್ರಗತಿ, ಆಧಾರ್ ಸೀಡಿಂಗ್, ಕಾಮಗಾರಿ ಮುಕ್ತಾಯ ವರದಿ (ಜಿಯೋ ಟ್ಯಾಗ್) ಪ್ರಗತಿ ಹಾಗೂ ಇತರೆ ನರೇಗಾ ಯೋಜನೆ ಸಂಬಂಧಿಸಿದ ವಿಷಯಗಳ ಕುರಿತು ಸಾಧಿಸಿದ ಪ್ರಗತಿ ಮಾಹಿತಿ ಪಡೆದುಕೊಂಡು ಅಗತ್ಯ ಸೂಚನೆ ನೀಡಿದರು.
ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕಡಿಮೆ ಪ್ರಗತಿ ಸಾಧನೆ ಮಾಡಿದ ಗ್ರಾ.ಪಂ ಪಿ.ಡಿ.ಓ.ಗಳಿಗೆ ಎಚ್ಚರಿಕೆ ನೀಡಿದ ಭಂವಾರ್ ಸಿಂಗ್ ಮೀನಾ ಅವರು, ಮುಂದಿನ ಒಂದು ವಾರದಲ್ಲಿ ನಿಗದಿಯಂತೆ ಪ್ರಗತಿ ಸಾಧಿಸುವಂತೆ ಖಡಕ್ ಸೂಚನೆ ನೀಡಿದರು. ಇನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನರೇಗಾ ಸಹಾಯಕ ನಿರ್ದೆಶಕರು ಕಡಿಮೆ ಸಾಧನೆ ಮಾಡಿದ ಗ್ರಾ.ಪಂ.ಗಳ ಕುರಿತು ವರದಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಇ.ಓ. ಅಬ್ದುಲ್ ನಬಿ, ನರೇಗಾ ಸಹಾಯಕ ನಿರ್ದೇಶಕ ಸೋಮಶೇಖರ್ ಹಾಗೂ ತಾಲೂಕಿನ ಎಲ್ಲಾ ಪಿ.ಡಿ.ಓ.ಗಳು ಭಾಗವಹಿಸಿದ್ದರು.