ಕಲಬುರಗಿಯ ಶರಣಬಸವೇಶ್ವರರು ಬಹಳ ಸತ್ಯುಳ್ಳಾಂವ ಎಂದು ಜನಪದರು ಹಾಡಿರುವ ನುಡಿ ನಿರಂತರವಾಗಿ ಜನಮನದಲ್ಲಿ ಮೊಳಗುತ್ತದೆ ಎಂದು ದೊಡ್ಡಪ್ಪ ಅಪ್ಪ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಆನಂದ ಸಿದ್ಧಾಮಣಿ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.
ಶರಣರ ಇಷ್ಟಲಿಂಗ ಪೂಜೆ ಮೂರು ಹೊತ್ತು ನಡೆಯುತ್ತಿತ್ತು. ತದನಂತರವೇ ಅವರ ಪ್ರಸಾದ, ದರ್ಶನ, ಅನುಭವ. ಇಷ್ಟಲಿಂಗ ಪೂಜೆಯಲ್ಲಿ ಅವರು ನಿರತರಾಗಿದ್ದಾಗ ಅವರ ಶರೀರ ಭೂಮಿ ಬಿಟ್ಟು ಮೂರು ಗೇಣು ಮೇಲೆ ಹೋಗುತ್ತಿತ್ತು. ಇಷ್ಟಲಿಂಗದೊಂದಿಎ ಅವರ ಮಾತು ಗಂಟೆಗಟ್ಟಲೆ ನಡೆಯುತ್ತಿತ್ತು. ಕೆಲವರು ಇದು ಹೇಗೆ ಸಾಧ್ಯ ? ನಮಗೇಕೆ ಸಾಧ್ಯವಾಗುತ್ತಿಲ್ಲ ಎಂದು ವಾದಿಸಿದರು. ಶರಣರ ಹತ್ತಿರ ಬಂದು ಅವರಿಗೆ ಕೇಳಿದಾಗ ಶರಣರು ಸಾಧ್ಯವೆಂದು ಹೇಳಿ ಒಳಗಿನ ಭಸ್ಮತಂದು ಅವರವರ ಇಷ್ಟಲಿಂಗಕ್ಕೆ ಹಚ್ಚಿದರು. ಮಹಾಮನೆಯಲ್ಲಿ ಎಲ್ಲರ ಇಷ್ಟಲಿಂಗಗಳು ಮಾತಾಡತೊಡಗಿದವು. ಮರ್ತ್ಯಲೋಕದವರು ಮಾತ್ರವಲ್ಲ ಕೈಲಾಸದವರು ಈ ಅದ್ಭುತ ನೋಡುತ್ತಾ ನಿಂತರು.
ಜಂಗಮನೊಬ್ಬ ಶರಣರ ಮಹಾಮನೆಗೆ ಬಂದು ಪ್ರಸಾದ ಪಡೆಯಲು ಕುಳಿತ. ಎಲ್ಲಾ ಪ್ರಸಾದ ಬಡಿಸಿದರೂ ಆತ ಮಾಡಲಿಲ್ಲ. ಬದಲಿಗೆ ’ ಕರು ಮುಟ್ಟದ ಆಕಳ ಹಾಲು ನೀಡಿರಿ’ ಎಂದು ಜಿದ್ದು ಹಿಡಿದ. ಎಲ್ಲರು ಶರಣರಿಗೆ ವಿಷಯ ತಿಳಿಸಿದರು. ನಗುತ್ತಾ ಶರಣರು ಗೊಡ್ಡಾಕಳೊಂದನ್ನು ತರಿಸಿ ಅದರ ಹಣೆಗೆ ವಿಭೂತಿ ಹಚ್ಚಿ ಮೈಮೇಲೆ ಕೈಯಾಡಿಸಲು ತಕ್ಷಣವೇ ಆಕಳು ತೊರೆಬಿಟ್ಟಿತು. ಆ ಹಾಲನ್ನು ಹಿಂಡಿ ಜಂಗಮನ ಪ್ರಸಾದಕ್ಕೆ ಅರ್ಪಿಸಲು ಹೇಳುತ್ತಾರೆ. ಆಗ ಜಂಗಮ ತಾನೇ ಪ್ರಸಾದಿಯಾಗಿ ಶರಣರ ಪಾದಕ್ಕೆ ಶರಣು ಹೋಗುತ್ತಾನೆ.
ಶರಣರು ಕೇವಲ ಪ್ರಸಾದ ದಾಸೋಹದ ಜತೆಗೆ ಜ್ಞಾನ ದಾಸೋಹ ಮಾಡಿದರು. ವಿದ್ಯೆ ಕಲಿಸುವ ಗುರುವೊಬ್ಬರನ್ನು ತಮ್ಮಲ್ಲಿಯೇ ಇಟ್ಟುಕೊಂಡು ಪಾಠ ಕಲಿಸುವ ವ್ಯವಸ್ಥೆ ಮಾಡಿದರು. ಎಲ್ಲರೂ ಆತನನ್ನು ಹೊಗಳಲು ಪ್ರಾರಂಭಿಸಿದಾಗ ಆತನಲ್ಲಿ ಅಹಂಕಾರ ಮನೆ ಮಾಡುತ್ತದೆ. ಮಕ್ಕಳನ್ನು ಬಯ್ಯಲು , ಹೊಡೆಯಲು ಪ್ರಾರಂಭಿಸಿದ. ಪಾಠ ಸರಿಯಾಗಿ ಹೇಳದೆ ಹೋದ. ಇದು ಶರಣಬಸವರಿಗೆ ಗೊತ್ತಾಯಿತು. ವಿದ್ಯಾರ್ಥಿಯೊಬ್ಬನಿಗೆ ಕರೆದು ಆತನ ಹಣೆಗೆ ವಿಭೂತಿ ಹಚ್ಚಿ ಕಿವಿಯಲ್ಲಿ ’ ಓಂ ನಮಃ ಶಿವಾಯ’ ಎಂಬ ಮಂತ್ರ ಹೇಳಿ ಕಳುಹಿಸುತ್ತಾರೆ. ಆ ಗುರುವಿಗಿಂತಲೂ ಆತನ ಬುದ್ಧಿ ತೀಕ್ಷ್ಣಗೊಳ್ಳುತ್ತದೆ. ವಿದ್ಯಾರ್ಥಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡದೆ ಹೋದ. ತಕ್ಷಣವೇ ಶರಣರಲ್ಲಿಗೆ ಹೋಗಿ ಅವರ ಪಾದ ಹಿಡಿದು ತಪ್ಪಾಯಿತು ಎಂದು ತಲೆ ತಗ್ಗಿಸಿ ನಿಂತಾಗ ಶರಣರು ವಿದ್ಯೆಗೆ ತಕ್ಕ ವಿನಯ ಇರಬೇಕಪ್ಪ ಗರ್ವ ಒಳ್ಳೆಯದಲ್ಲ ಅದು ಬುದ್ದಿಯನ್ನು ಹಾಳು ಮಾಡುತ್ತದೆ ಎಂದರು.
ಒಂದು ಸಲ ಮೂರ್ಖನೊಬ್ಬ ತಾಯಿಯೊಂದಿಗೆ ವಾದಕ್ಕಿಳಿದು ಆಕೆಯನ್ನು ಒದೆದು ಕೈಕಾಲು ಮುರಿದ. ಅಂಗಳದಲ್ಲಿಯೇ ಬಿದ್ದಿದ್ದಾಳೆ. ನೀರು ಎಂದು ಹಲುಬುತ್ತಾಳೆ. ’ಯಪ್ಪಾ ಶರಣಾ’ ಎಂದು ಕೂಗಲು ಪ್ರಾರಂಭಿಸುತ್ತಾಳೆ. ಶರಣರಿಗೆ ಅವಳ ಕೂಗು ಕೇಳಿಸುತ್ತದೆ. ಭಸ್ಮವಿಡಿದು ಆಕೆಯ ಮನೆಗೆ ಹೋಗಿ ಅವಳನ್ನು ಸಮಧಾನ ಮಾಡುತ್ತಾ ಮೈಗೆಲ್ಲ ವಿಭೂತಿ ಹಚ್ಚುತ್ತಾರೆ. ಎದ್ದು ಕೂಡುತ್ತಾಳೆ. ಬೆಳಗ್ಗೆ ಸೊಸೆ ಎದ್ದು ಅತ್ತೆಯನ್ನು ಹುಡುಕುತ್ತಾಳೆ ಆದರೆ ಅತ್ತೆ ಕಾಣುವುದಿಲ್ಲ. ಗಂಡನಿಗೆ ಎಬ್ಬಿಸಲು ಹೋಗುತ್ತಾಲೆ ಆತನ ಕಾಲು ನಿಸ್ತೇಜಗೊಂಡಿದೆ. ಏಳಲು ಬರುತ್ತಿಲ್ಲ. ಮನೆ ಮಂದಿ ಗಾಬರಿ. ಸೊಸೆ ಶರಣರಲ್ಲಿ ಬಂದು ಶರಣ ಪಾದವಿಡಿದು ತಪ್ಪಾಯಿತು ಎಂದು ಬೇಡಿಕೊಳ್ಳುತ್ತಾಳೆ. ಶರಣರು ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕೆಂದು ಹೇಳಿ ಕಾಲು ಸರಿ ಮಾಡುತ್ತಾರೆ. ಹೀಗೆ ಶರಣ ಲೀಲೆಗಳು ಜನಜನೀತವಾಗಿವೆ ಎಂದು ಹೇಳಿದರು.