ಬೆಂಗಳೂರು; ಮೂಲದ ಸೃಷ್ಠಿ ಸಂಸ್ಥೆ, ‘ಸ್ಕೂಲ್ ಬೆಲ್’ ಮತ್ತು ಯುವಕಸಂಘ ಜಂಟಿಯಾಗಿ ಜುಲೈ 1 ರಂದು ಏರ್ಪಡಿಸಿದ ರಾಜ್ಯ ಮಟ್ಟದ “ಶಾಲಾ ವಿನ್ಯಾಸ” ಸ್ಪರ್ಧೆಯಲ್ಲಿ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‍ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಹೊಸ ಶಿಕ್ಷಣ ನೀತಿ ಆಧಾರಿತ ಶಾಲಾ ವಿನ್ಯಾಸಕ್ಕೆ ಮೂರನೇ ಸ್ಥಾನ ದೊರೆತಿದ್ದು ಜೊತೆಗೆ 10,000/- ರೂಪಾಯಿ ನಗದು ಬಹುಮಾನ ಕೂಡ ದೊರೆತಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ 30 ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಯಶಸ್ಸಿಗೆ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ಮಾತನಾಡುತ್ತ ಮುಂಬರುವ ದಿನಗಳಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಲ್ಲಿ ವಿದ್ಯಾರ್ಥಿಗಳಿಗೆ ಅನೂಕುಲವಾಗಲು ಡಿಪ್ಲೋಮಾ ಮತ್ತು ಸ್ನಾತಕೋತ್ತರ ಕೋರ್ಸುಗಳನ್ನು ಪ್ರಾರಂಭಿಸುವ ಗುರಿಯಿದ್ದು ಅದಕ್ಕಾಗಿ ಬೇಕಾಗುವ ಸವಲತ್ತುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಮಹಾವಿದ್ಯಾಲಯದ ಸಂಚಾಲಕರು ಹಾಗೂ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಜೆ. ಖಂಡೇರಾವ, ವಿನಯ ಪಾಟೀಲ, ಡಾ. ಅನೀಲಕುಮಾರ ಪಟ್ಟಣ ಹಾಗೂ ಡಾ. ರಜನೀಶ ವಾಲಿ ತಮ್ಮ ಹರ್ಷ ವ್ಯಕ್ತಪಡಿಸಿ ಮಹಾವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ ತಾವು ಕಂಕಣಬದ್ದರಾಗಿದ್ದು ಅದಕ್ಕಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿದ ಪ್ರಾಚಾರ್ಯರಾದ ಪ್ರೊ. ಪರಂಜ್ಯೋತಿ ಪಾಟೀಲ ತಮ್ಮ ಸ್ಕೂಲ್ ಆಫ್ ಆರ್ಕಿಟೆಕ್ಚರ್‍ನಲ್ಲಿ ಆಧುನಿಕ ಆಂತರಿಕವಿನ್ಯಾಸ ಕುರಿತು ಸರ್ಟಿಫಿಕೇಟ್ ಕೋರ್ಸನ್ನು ಪ್ರಾರಂಭಿಸಿದ್ದು ಇಚ್ಚೆಯುಳ್ಳವರು ನೊಂದಾಯಿಸಬಹುದಾಗಿದೆ ಮತ್ತು ಇತರೆ ವೃತ್ತಿಪರ ಕೋರ್ಸುಗಳನ್ನು ಶಿಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ತಿಳಸಿದರು.
ಬಹುಮಾನ ಪಡೆದ ಮೂರನೇ ವರುಷದ ವಿದ್ಯಾರ್ಥಿಗಳಾದ ಆರೂದ್ದ, ನಾಗರಾಜ, ಪ್ರೀತಿ, ಅಮೃತ ಮತ್ತು ನೇಹಾಶ್ರೀ ಅವರಿಗೆ ಮಹಾವಿದ್ಯಾಲಯದ ಡೀನ್‍ರಾದ ಡಾ. ಎಸ್. ಆರ್. ಹೊಟ್ಟಿ ಹಾಗೂ ವಿದ್ಯಾರ್ಥಿ ಸಲಹಾಗಾರರಾದ ಪ್ರೊ. ರೇಶ್ಮಾ ಪರ್ವೀನ್ ಪ್ರಶಂಶಿಸಿ ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳ ಈ ಯಶಸ್ಸಿಗೆ ಮಹಾವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂಧಿಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.