ಕಲಬುರಗಿ : ನೂತನ ಸಿದ್ಧರಾಮಯ್ಯನವರ ಸರಕಾರ ಮಂಡಿಸಲಿರುವ ಮೊದಲನೇ ಬಜೆಟ್ ನಲ್ಲಿ ಹಿಂದುಳಿದ 371ನೇ(ಜೆ) ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಎಂಬ ಹೆಸರಿಗೆ ತಕ್ಕಂತೆ ಕಲ್ಯಾಣ ಮಾಡಲು ನೂತನ ಸರಕಾರ ಈ ಕೆಳಗೆ ನಮುದಿಸಿದ ಪ್ರಮುಖ ಅಂಶಗಳಿಗೆ ಬಜೆಟ್‌ನಲ್ಲಿ ಗಂಭೀರವಾಗಿ ಪರಿಗಣಿಸಲು ಕಲ್ಯಾಣ ಕರ್ನಾಟಕ ಜನಮಾನಸದ ವತಿಯಿಂದ ಕಲ್ಯಾಣ ಕರ್ನಾಟಕ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಳಣ ದಸ್ತಿಯವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
2002 ರಲ್ಲಿ ರಚನೆಯಾಗಿರುವ ನಂಜುಂಡಪ್ಪ ವರದಿ ಒಂದು ತಾಲೂಕಾ ಕೇಂದ್ರವನ್ನು ಸೂಚ್ಯಂಕ ಮಾಡಿಕೊಂಡು ಸಮಗ್ರ ರಾಜ್ಯದ ವೈಜ್ಞಾನಿಕ ಆಧಾರದ ಮೇಲೆ ಅದ್ಯಯನ ಮಾಡಿ ರಚನೆ ಮಾಡಿರುವ ವರದಿಯಾಗಿದೆ. ಈ ವರದಿಯ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಸರಕಾರ ತುರ್ತಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಹಿಂದುಳಿಯುವಿಕೆಯ ಬಗ್ಗೆ ವರದಿ ರಚಿಸಲು ಕ್ರಮ ಕೈಗೊಳ್ಳಬೇಕು. ಕಲ್ಯಾಣದ ಹಿಂದುಳಿಕೆಗೆ ಒಂದು ಗ್ರಾಮ ಪಂಚಾಯತ್ ಸೂಚ್ಯಂಕ ವನ್ನಾಗಿ ಮಾಡಿಕೊಂಡು ರಚಿಸಬೇಕು. ಈ ವರದಿ ತಯಾರಾಗದೆ ಕಲ್ಯಾಣಕ್ಕೆ ಎಷ್ಟೇ ಹಣ ನೀಡಿದರೂ ಕಾಲಮಿತಿಯ ಪರಿಣಾಮಕಾರಿ ಅಭಿವೃದ್ಧಿ ಆಗುವದಿಲ್ಲ ಮತ್ತು ಪ್ರಾದೇಶಿಕ ಸಮತೋಲನೆಯೂ ನಿವಾರಣೆಯಾಗುವದಿಲ್ಲ. ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬಜೆಟ್‌ನಲ್ಲಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರುಟಿನ ಬಜೆಟ್ ಮತ್ತು ವಿಶೇಷ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು 5 ಇಲ್ಲವೇ 10 ವರ್ಷದ ವೈಜ್ಞಾನಿಕ ಕ್ರೀಯಾ ಯೋಜನೆಯನ್ನು ರೂಪಿಸಿ ಅದರ ಆಧಾರದ ಮೇಲೆ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ ಸೃಷ್ಟಿ, ಪ್ರವಾಸೋಧ್ಯಮ, ಕ್ರೀಡೆ, ಕೃಷಿ ಮುಂತಾಗಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೃಷಿ ನೀತಿ, ಪ್ರತ್ಯೇಕ ಜಲ ನೀತಿ, ಪ್ರತ್ಯೇಕ ಕೈಗಾರಿಕಾ ನೀತಿಜಾರಿಗೆ ತರುವ ಮುಖಾಂತರ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ಪೂರಕವಾಗುವುದು. ಇದರಿಂದ ಕಲ್ಯಾಣದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಹೈದ್ರಾಬಾದ ಕರ್ನಾಟಕ ಎಂಬ ಹೆಸರು ಬದಲಾವಣೆ ಮಾಡಿ ಕಲ್ಯಾಣ ಕರ್ನಾಟಕ ಹೆಸರು ಇಟ್ಟಿರುವಂತೆ ಕಲ್ಯಾಣದ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಮಾಡದೇ ಇದ್ದರೆ, ಕಲ್ಯಾಣದ ಪ್ರಗತಿ ಸಾಧ್ಯವಾಗುವದಿಲ್ಲ. ಅದರಂತೆ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನವಾಗುವದಿಲ್ಲ. ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದು ತುರ್ತು ಅವಶ್ಯವಾಗಿದೆ. ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡದೇ ಮತ್ತೇ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಈ ಮಂಡಳಿ ರಾಜಕೀಯ ವ್ಯಕ್ತಿಗಳಿಗೆ ಪುನರ್ ವಸತಿ ಕೇಂದ್ರ ವಾಗುತ್ತದೆ ವಿನಃ ಈ ಭಾಗದ ಅಸಮತೋಲನೆ ನಿವಾರಣೆಯ ಸದುದ್ದೇಶ ಈ ಮಂಡಳಿಯಿಂದ ಉಪಯೋಗವಾಗುವದಿಲ್ಲ. ಈ ಬಗ್ಗೆ ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಲ್ಯಾಣ ಕರ್ನಾಟಕದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಕಲ್ಯಾಣದ ಎಂಟು ಸಚಿವರು ಕಲ್ಯಾಣದ ಜನರಿಗೆ ಆಶ್ಚರ್ಯ ಉಂಟು ಮಾಡುವ ರೀತಿಯಲ್ಲಿ ಜನಮಾನಸಕ್ಕೆ ಪೂರಕವಾದ ರೀತಿಯಲ್ಲಿ ಬಜೆಟ್ ನಲ್ಲಿ ನಮ್ಮ ನಿರೀಕ್ಷೆಗಳಿಗೆ ಸ್ಪಂದಿಸಲು ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸುವುದು ಅತಿ ಅವಶ್ಯವಾಗಿದೆ ಎಂದು ಒತ್ತಾಯಿಸಿದ್ದಾರೆ.