ರಾಜ್ಯದ ಬಜೆಟ್ ಬಗ್ಗೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು

0
31

ಕಲಬುರಗಿ: ಹಿಂದಿನ ನಾಲ್ಕು ವರ್ಷಗಳ ಕಾಲ ಸತತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಲಬುರಗಿ ಜಿಲ್ಲೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಹಲವು ದೊಡ್ಡ ಕೊಡುಗೆಗಳನ್ನು ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಐಟಿ/ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಬಜೆಟ್ ಕುರಿತು ಬಣ್ಣಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ‌ ನೀಡಿರುವ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಒಂದು ವರ್ಷಕ್ಕೆ ರೂ 5,000 ಕೋಟಿ ಹಣ ಒದಗಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗುತ್ತಿದೆ. ಇದು ನಮ್ಮ ಭಾಗದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಬದ್ಧತೆಯ ದ್ಯೋತಕ ಎಂದು ಅವರು ಹೇಳಿದ್ದಾರೆ.

Contact Your\'s Advertisement; 9902492681

ಇನ್ನು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಗ್ರಾಮ ಪಂಚಾಯತಿ ಕೇಂದ್ರಗಳ ಲೈಬ್ರರಿಗಳನ್ನು “ಅರಿವು ಕೇಂದ್ರ”ಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ನಮ್ಮ ಭಾಗದ ಹೆಣ್ಣು ಮಕ್ಕಳ ಘನತೆ ಕಾಪಾಡುವ ನಿಟ್ಟಿನಲ್ಲಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನು ಪ್ರತಿ ಸಂಕೀರ್ಣಕ್ಕೆ 25 ಲಕ್ಷದಂತೆ 400 ಮಹಿಳಾ ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ ರೂ 100 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ನಮ್ಮ ಭಾಗದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಪ್ರತಿ ಘಟಕಕ್ಕೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಸಮರ್ಥನೀಯ ಹಾಗೂ ಸ್ವಾವಲಂಬಿ ವ್ಯವಸ್ಥೆ ಸ್ಥಾಪಿಸಲು ‘ಮೆಟೀರಿಯಲ್ ರಿಕವರಿ ಫೆಸಿಲಿಟಿ’ಗಳ ಸ್ಥಾಪನೆಗೆ ಅನುದಾನ ಒದಗಿಸಲಾಗಿದೆ.

ಇನ್ನು ಕಲಬುರ್ಗಿ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜನರ ಬಯಕೆಯಾಗಿದ್ದ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ಥಾಪನೆಯನ್ನು ನಮ್ಮ ಸರ್ಕಾರ ಘೋಷಿಸಿದೆ. ರೂ 70 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ. ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯಾರಂಭ ಹಾಗೂ ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ರೂ 155 ಕೋಟಿ ಅನುದಾನವನ್ನೂ ಒದಗಿಸಲಾಗಿದ್ದು ನೂತನ ಟ್ರಾಮಾ ಕೇರ್ ಸೆಂಟರ್‌ ಕಾರ್ಯಾಚರಣೆಗೆ ರೂ 30 ಕೋಟಿ ಅನುದಾನವನ್ನೂ ಒದಗಿಸಲಾಗಿದೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಘಟಕದ ಸೌಲಭ್ಯಗಳ ಸುಧಾರಣೆಗೆ ರೂ 10 ಕೋಟಿ ಅನುದಾನ ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

ಸನ್ನತಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆಯಡಿ ಕೇಂದ್ರದ ನೆರವಿಗಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಸನ್ನತಿ ಗ್ರಾಮ, ಮಳಖೇಡ ಕೋಟೆ ಹಾಗೂ ಕಲಬುರ್ಗಿ ಕೋಟೆಗಳನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ವಿಶೇಷ ಅನುದಾನವನ್ನು ಒದಗಿಸಲಾಗಿದೆ. ಜೊತೆಗೆ ಕಲಬುರ್ಗಿ ವಸ್ತು ಸಂಗ್ರಹಾಲಯವನ್ನು ಮೇಲ್ದರ್ಜೆಗೆ ಏರಿಸಲು ಅನುದಾನ ಒದಗಿಸಲಾಗಿದೆ.

ಜಿಲ್ಲೆಯ ಯುವಜನರ ಸಬಲೀಕರಣಕ್ಕಾಗಿ ಕಲಬುರಗಿಯಲ್ಲಿ ರಾಜೀವ್ ಗಾಂಧಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳು ಸ್ಥಾಪನೆಯಾಗಲಿದೆ. ಜೊತೆಗೆ ಸಮರೋಪಾದಿಯಲ್ಲಿ ಜಿಲ್ಲೆಯಲ್ಲಿ ಕೆರೆ ತುಂಬುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಕಲಬುರ್ಗಿಯ ಸಿಖ್ ಸಮುದಾಯದ ಪೂಜಾಕೇಂದ್ರ ಗುರುದ್ವಾರದ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗಿದೆ.

ವಿಶೇಷವಾಗಿ ಜಿಲ್ಲೆಯ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‌ಎಸ್‌ಐಡಿಸಿ) ಆಶ್ರಯದಲ್ಲಿ ಚಿತ್ತಾಪುರದಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.

ಈ ಬಜೆಟ್ ಕಲ್ಯಾಣ ಕರ್ನಾಟಕ ಹಾಗೂ ಕಲಬುರ್ಗಿ ಪಾಲಿಗೆ ಆಶಾದಾಯಕವಾಗಿದ್ದು, ಹಿಂದಿನ ಅನ್ಯಾಯಗಳನ್ನು ಸರಿಪಡಿಸಿ, ನಮ್ಮ ಜಿಲ್ಲೆಯನ್ನು ಮತ್ತೆ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಲು ಮೊದಲ ಹೆಜ್ಜೆಯನ್ನು ಇಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here