ಶಹಾಬಾದ: ತಾಲೂಕಿನ ಮರತೂರ ಗ್ರಾಮದ ಸರಕಾರಿ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಿ ಪಿಯು ಕಾಲೇಜನ್ನಾಗಿ ಮಾಡಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರವಿ ನರೋಣಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗಾಗಲೇ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದ 667 ಸರಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದ್ದಾರೆ. ಅದರಂತೆ 667ರಲ್ಲಿ ಮರತೂರ ಗ್ರಾಮದ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಿ ಪಿಯು ಕಾಲೇಜನ್ನಾಗಿ ಮಾಡಬೇಕು ಎನ್ನುವುದು ಒತ್ತಾಯವಾಗಿದೆ. ಗ್ರಾಮದಲ್ಲಿ 8 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ.
ಗ್ರಾಮದ ಸರಕಾರಿ ಶಾಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಎಸ್.ಎಸ್.ಎಲ್.ಸಿ ಮುಗಿದ ನಂತರ ಕಾಲೇಜು ಶಿಕ್ಷಣಕ್ಕಾಗಿ ಕಲಬುರಗಿ ಮತ್ತು ಶಹಾಬಾದ ಅವಲಂಬಿರಾಗಬೇಕಿದೆ. ಕಲಬುರಗಿ-ಶಹಾಬಾದ ನಗರಕ್ಕೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ಇಲ್ಲಿನ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲೇ ಪದವಿ ಪೂರ್ವ ಕಾಲೇಜು ಸ್ಥಾಪನೆಯಾದರೆ ಗ್ರಾಮದ ಎಲ್ಲಾ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ.ಕೂಡಲೇ ಮರತೂರ ಗ್ರಾಮದ ಸರಕಾರಿ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಿ ಪಿಯು ಕಾಲೇಜನ್ನಾಗಿ ಮಾಡಬೇಕೆಂದು ರವಿ ನರೋಣಿ ಒತ್ತಾಯಿಸಿದ್ದಾರೆ.