ಬೆಂಗಳೂರು: ಬೆಂಗಳೂರಿನಲ್ಲಿ ಆಗಸ್ಟ್ 16ರಂದು ಹಿಂದಿ ಭಾಷೆಯಲ್ಲಿ ಹಾಕಿದ ಕಟೌಟ್ ತೆರವುಗೊಳಿಸಿದ ಕನ್ನಡಪರ ಹೋರಾಟಗಾರರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡನೀಯ ಹಾಗೂ ಇದು ನಾಡು ನುಡಿ ಕನ್ನಡ ಭಾಷೆಯ ಮೇಲೆ ಹಿಂದಿ ಭಾಷೆಯನ್ನು ಹೇರುವ ಸಂಚಿನ ಪೂರಕವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಇಂದಿನ ಅನಿವಾರ್ಯ ಕಾಲಘಟ್ಟದಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯನ್ನು ಹೇರುವಂತಹ ಸಂಸ್ಕೃತಿಯ ವಿರುದ್ಧ ಚಳುವಳಿಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅವಶ್ಯಕತೆಯಿದೆ. ಕರ್ನಾಟಕದ ನೆಲದಲ್ಲಿ ವ್ಯಾಪಾರ, ಸ್ಥಾವರಗಳನ್ನು ನಿರ್ವಹಿಸುವ ಹೊರ ರಾಜ್ಯದ ಜನರು ವಿಶೇಷವಾಗಿ ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ಬಂದ ಬಂಡವಾಳಶಾಹಿಗಳು ತಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸೂಕ್ತ ಉದ್ಯೋಗ ಅಥವಾ ಗೌರವಾರ್ಹ ವೇತನ ನೀಡದೆ ಶೋಷಿಸುವುದು ಕೂಡಾ ಕನ್ನಡ ಸಂಸ್ಕೃತಿಯ ಮೇಲೆ ನಡೆಸುವ ದಬ್ಬಾಳಿಕೆಯಾಗಿದೆ. ಕನ್ನಡಿಗರು ತಮ್ಮ ನಾಡು ನುಡಿ, ಸ್ವಾಭಿಮಾನವನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಒಂದಾಗಬೇಕೆಂದರು
ಕನ್ನಡ ಚಳುವಳಿಗಾರರನ್ನು ಬಂಧಿಸಿದ ಪೊಲೀಸರ ಕ್ರಮ ಅತ್ಯಂತ ಖಂಡನೀಯ ಮಾತ್ರವಲ್ಲದೆ ಹಿಂದಿ ಭಾಷೆಯನ್ನು ಹೇರಿದ ಬಗ್ಗೆ ಪ್ರಶ್ನಿಸಿದ ಚಳುವಳಿಗಾರರ ವಿರುದ್ಧ ದೂರು ಕೊಟ್ಟವರೂ ಕೂಡ ತಮ್ಮ ಅಹಂಕಾರವನ್ನು ಸಾಬೀತುಪಡಿಸಿದೆ. ಚಳುವಳಿಗಾರರ ಮೇಲೆ ಹಾಕಿದ ಕೇಸನ್ನು ವಾಪಸು ಪಡೆಯಬೇಕು ಹಾಗೂ ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಭಾಷೆಯನ್ನು ಪ್ರದರ್ಶಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಎಚ್ಚರಿಕೆ ನೀಡಿದರು.