ಕಲಬುರಗಿಯ ಶರಣಬಸವೇಶ್ವರರು ಅನೇಕ ಲೀಲೆಗಳನ್ನು ಮಾಡಿ ಜನಸಾಮಾನ್ಯರಿಗೆ ಕಾಮಧೇನು ಕಲ್ಪವೃಕ್ಷವಾಗಿ ಶಿವನ ಸ್ವರೂಪಿಗಳಾಗಿದ್ದಾರೆ ಎಂದು ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರೊ. ವಿಠೋಬಾ ದೊಣ್ಣೆಗೌಡರ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಕುಡುಕ ಗಂಡನೊಬ್ಬ ದಿನಾಲು ಕುಡಿದು ಮಡದಿಗೆ ಹೊಡೆಯುತ್ತಿದ್ದ. ಹೆಂಡತಿ ಬಹಳ ನೊಂದು ಶರಣರಿಗೆ ಬೇಡಿಕೊಂಡಳು. ಇದು ಶರಣರಿಗೆ ತಿಳಿಯಿತು. ಅವನು ಕುಡಿಯಲು ಹೊರಟಾಗ ಹಾವೊಂದು ಬೆನ್ನೆಟ್ಟಿಸಿಕೊಂಡು ಹೊರಟಿತು. ಆತ ಓಡುತ್ತಾ ಶರಣರ ಮಹಾಮನೆಗೆ ಬಂದ. ಶರಣರ ಎದುರಿಗೆ ಅವನನ್ನು ನಿಲ್ಲಿಸಿ ಆ ಸರ್ಪ ಹೊರಟು ಹೋಯಿತು. ಆಗ ಶರಣರು ಆತನ ಹಣೆಗೆ ಭಸ್ಮವನ್ನು ಹಚ್ಚಿದಾಗ ನಿಶೆ ಒಮ್ಮೇಲೆ ಇಳಿದು ಹೋಗುತ್ತದೆ. ತಪ್ಪಾಯಿತು ಎಂದು ಶರಣರ ಪಾದಕ್ಕೆ ಬಿಳುವನು ಮುಂದೆ ಕುಡಿಯುವದನ್ನು ಬಿಟ್ಟು ಶರಣರ ಭಕ್ತನಾಗುತ್ತಾನೆ.
ಒಂದು ಸಲ ಕಳ್ಳರು ಮಹಾಮನೆಗೆ ನುಗ್ಗಿದ್ದರು. ಕೊಟ್ಟಿಗೆಯಲ್ಲಿರುವ ಆಕಳು ಕರುಗಳನ್ನು ಕರೆದೊಯ್ಯಲು ಪ್ರಾರಂಭಿಸಿದರು. ಮಲಗಿದ ಶರಣರಿಗೆ ಗೊತ್ತಾಯಿತು. ಮಹಾಮನೆಯ ಮೇಲೆ ವಿಶ್ವಾಸವಿದ್ದರೆ ತಾವೇ ವಾಪಸ್ಸು ಬರುತ್ತವೆಂದು ಸುಮ್ಮನಾದರು. ಸ್ವಲ್ಪ ಮುಂದಕ್ಕೆ ಹೋಗಿದ್ದ ಆಕಳುಗಳು ತಾವೇ ತಿರುಗಿ ನಿಂತವಲ್ಲದೆ ಕಳ್ಳರನ್ನೇ ಅಟ್ಟಿಸಿಕೊಂಡು ಕೊಟ್ಟಿಗೆಗೆ ತರುತ್ತವೆ. ಅವರೆಲ್ಲರನ್ನು ನಡುವೆ ಹಾಕಿ ಸುತ್ತೆಲ್ಲ ನಿಂತುಬಿಡುತ್ತವೆ. ಶರಣರು ಬಂದ ಮೇಲೆ ಅವರ ಪಾದದ ಮೇಲೆ ಬಿದ್ದು ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ’ಕದ್ದು ತಿನ್ನೋ ಬುದ್ಧಿ ನಿಮಗೆ ಸರಿಯಾದುದಲ್ಲ ನೀವು ಮಾನವರು ಸರಿಯಾದ ಮಾರ್ಗದಲ್ಲಿ ನಡೆಯಿರಿ’ ಎಂದು ಶರಣರು ಬುದ್ಧಿ ಹೇಳಿ ಕಳುಹಿಸುತ್ತಾರೆ.
ಶಿವರಾತ್ರಿ ದಿನ ಶರಣರ ದರ್ಶನಕ್ಕೆಂದು ಅಸಂಖ್ಯಾತ ಜನ ಬಂದು ಅವರ ಅನುಭವದೊಳಗೆ ಮಗ್ನರಾಗಿದ್ದರು. ಆಗ ಅಲ್ಲಿಯೇ ಹೊಂಚು ಹಾಕಿಕೊಂಡು ಕುಳಿತ ಹುಲಿಯೊಂದು ಒಬ್ಬ ಪುರುಷನನ್ನು ಬಾಯೊಳಗೆ ಹಿಡಿದುಕೊಂಡು ಹೊರಟಿತು. ಜನರೆಲ್ಲ ಚೀರಲು, ಓಡಲು ಪ್ರಾರಂಭಿಸಿದರು. ಶರಣರು ತಮ್ಮ ಅನುಭಾವವನ್ನು ನಿಲ್ಲಿಸಿ ಕುಳಿತಲ್ಲಿಂದಲೇ ಹುಲಿಯನ್ನು ಕರೆಯುತ್ತಾರೆ. ಬಾಲ ಅಲ್ಲಾಡಿಸುತ್ತಾ ಬಂದ ಆ ಹುಲಿ ಶರಣರ ಮುಂದೆ ಸಾಧು ಪ್ರಾಣಿಯಾಗಿ ನಿಂತುಬಿಡುತ್ತದೆ. ಹೀಗೇಕೆ ? ಎಂದಾಕ್ಷ ಬಾಯಿಯೊಳಗೆ ಹಿಡಿದ ಆ ಪುರುಷನನ್ನು ಉಗುಳಿ ಬಿಡುತ್ತದೆ. ಭಸ್ಮ ತರಿಸಿ ಆತನ ಮೈಗೆ ಹಚ್ಚಿದಾಗ ಆತ ಎದ್ದು ಕೂಡುತ್ತಾನೆ. ಹುಲಿ ಎಂಟು ದಿನ ಶರಣರ ಹತ್ತಿರ ಉಳಿದು ಕಾಡಿಗೆ ಹೋಗುತ್ತದೆ.
ಒಂದು ದಿನ ಜ್ಯೋತಿಷ್ಯರೊಬ್ಬರು ದಂಪತಿಗಳಿರ್ವರಿಗೆ ’ ನಿಮ್ಮ ಮನೆಯ ಬಾಗಿಲಿನಲ್ಲಿ ನಿಧಿ ಇದೆ. ಅದು ಹೊರಗೆ ತೆಗೆಯಬೇಕಾದರೆ ನಿಮ್ಮ ಮಗನಿಗೆ ಬಲಿಕೊಡಬೇಕೆಂದು’ ತಿಳಿಸುತ್ತಾರೆ. ನಿಧಿಗೆ ಆಸೆಪಟ್ಟ ಆ ದಂಪತಿಗಳು ತಮ್ಮ ೨೧ ವರ್ಷದ ಮಗನಿಗೆ ಬಲಿಕೊಡಲು ನಿರ್ಧರಿಸುತ್ತಾರೆ. ಅಮವಾಸ್ಯೆಯ ದಿನ ರಾತ್ರಿ ೧೨ ಗಂಟೆಗೆ ತಮ್ಮ ಮಗನಿಗೆ ಕಟ್ಟಿ ಹಾಕುತ್ತಾರೆ. ಆ ಹುಡುಗ ತನ್ನ ಮನಸ್ಸಿನಲ್ಲಿ ಏಕನಿಷ್ಠೆಯಿಂದ ಶರಣರನ್ನು ನೆನೆಯುತ್ತಾನೆ. ತಕ್ಷಣವೇ ಕಟ್ಟಿದ ಹಗ್ಗ ತಾನಾಗಿಯೆ ಬಿಚ್ಚಿಕೊಳ್ಳುತ್ತದೆ.
ಪಂಚಾಂಗದವನನ್ನೆ ಕಟ್ಟಿ ಅವನು ಶರಣರ ಹತ್ತಿರ ಹೋಗಿ ನಾನು ಮನೆಗೆ ಹೋಗುವುದಿಲ್ಲ ನಿಮ್ಮ ಹತ್ತಿರನೆ ಉಳಿಯುತ್ತೇನೆ ಎಂದು ಹಠ ಹಿಡಿಯುತ್ತಾನೆ. ಶರಣರು ಅವರ ತಂದೆ ತಾಯಿ ಬುದ್ಧಿವಾದ ಹೇಳಿ ಅವರೊಂದಿಗೆ ಮಗನನ್ನು ಕಳುಹಿಸಿಕೊಡುತ್ತಾರೆ. ಮನೆಗೆ ಹೋಗಿ ನೋಡಿದಾಗ ಪಂಚಾಂಗದವನು ಅಲ್ಲಿಯೇ ಇರುತ್ತಾನೆ. ಹಗ್ಗ ಬಿಚ್ಚಲು ಹೋದರೆ ಬಿಚ್ಚಲ್ಲ. ಎರಡು ಮೂರು ದಿನ ನೀರಿಲ್ಲದೆ ನಿಂತಿದ್ದಾನೆ. ಕೊನೆಗೆ ಶರಣರು ಕೈ ಎತ್ತಲು ಆ ಹಗ್ಗ ತಾನಾಗಿಯೇ ಬಿಚ್ಚಿಕೊಳ್ಳುತ್ತದೆ. ಶರಣರ ಪಾದಕ್ಕೆ ಬಿದ್ದು ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಹೀಗೆ ಶರಣರ ಅನೇಕ ಲೀಲೆಗಳು ನಡೆದು ಸಮಾಜ ಉದ್ಧಾರಗೊಂಡಿದೆ ಎಂದು ಹೇಳಿದರು.