ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುರಿತು ಇಲ್ಲಸಲ್ಲದ ಅರೋಪ ಮಾಡುತ್ತಾ, ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವ ಅಧಿಕಾರಿ-ನೌಕರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕವು ಆಗ್ರಹಿಸಿದೆ.
ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ನೇತೃತ್ವದ ನೌಕರರು ನಿಯೋಗವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಸಂಘದ ಘನತೆಗೆ ಧಕ್ಕೆ ತರುತ್ತಿರುವ ಐದು ಜನ ಅಧಿಕಾರಿ-ನೌಕರರ ಮೇಲೆ ಕ್ರಮಕ್ಕೆ ಆಗ್ರಹಿಸಿದೆ.
ಸಿ.ಷಡಕ್ಷರಿ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಮೇಲೆ ನೌಕರರ ಬಹುದಿನಗಳ ಬೇಡಿಕೆ ಒಂದೊಂದಾಗಿ ಈಡೇರಿವೆ. ಇದರಲ್ಲಿ ನೌಕರರ ಏಳನೇ ವೇತನ ಆಯೋಗ ರಚನೆ, ಶೇ.17 ಮಧ್ಯಂತರ ಪರಿಹಾರ ಮಂಜೂರು, ಎನ್.ಪಿ.ಎಸ್. ರದ್ದುಗೊಳಿಸಿ ಓ.ಪಿ.ಎಸ್. ಜಾರಿಗೆ ಅಧ್ಯಯನ ಸಮಿತಿ ರಚನೆ, ಶುಲ್ಕ ರಹಿತ ಆರೋಗ್ಯ ಚಿಕಿತ್ಸೆ, ಮಹಿಳಾ ನೌಕರರಿಗೆ 6 ತಿಂಗಳ ಶಿಶು ಪಾಲನೆ ರಜೆ, ಮುಂಬಡ್ತಿ ಭಾಗ್ಯ, ಇಲಾಖೆಗಳ ಸಿ. & ಆರ್. ತಿದ್ದುಪಡಿ ಸೇರಿದಂತೆ ಅನೇಕ ನೌಕರರ ಸ್ನೇಹಿ ಕೆಲಸಗಳು ಜಾರಿಗೆ ಬಂದಿವೆ. ಇದಲ್ಲದೆ ಸಂಘವು ಸಮಾಜ ಮುಖಿ ಕೆಲಸದಲ್ಲಿಯೂ ಸಹಾಯದ ಹಸ್ತ ಚಾಚಿದೆ ಎಂದು ಆಗ್ರಹ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿನ ನೌಕರರ ಸಂಘದ ಬೆಳವಣಿಗೆ ಸಹಿಸದವರು ಸಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡುತ್ತಾ, 5.25 ಲಕ್ಷ ನೌಕರರ ಮಾತೃ ಸಂಸ್ಥೆಯ ಹೆಸರಿಗೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರದಲ್ಲಿ ಅರೋಪಿಸಲಾಗಿದೆ.
ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಅಜೀಮ್, ಹನುಮಂತರಾಯ ಗೊಳಸಾರ್, ಸಿದ್ದಲಿಂಗಯ್ಯ ಮಠಪತಿ, ಬಾಬು ಮೌರ್ಯ, ಉಮಾದೇವಿ, ರವಿ ಮಿರಸ್ಕರ್, ಹನುಮಂತರಾವ ಮರಡಿ, ಮಲ್ಲಿನಾಥ ಮಂಗಲಗಿ, ಗುರುಲಿಂಗಪ್ಪ ಪಾಟೀಲ್, ಅಶೋಕ್ ಶಾಬಾದಿ, ಅಬ್ದುಲ್ ಜಮೀಲ್ ಅವ್ವಣ್ಣ ತಳವಾರ್, ವೀರೇಂದ್ರ ಪೂಜಾರಿ, ರಂಗನಾಥ ಪೂಜಾರಿ, ಗಜೇಂದ್ರ ರವಿಕುಮಾರ್ ಮೊದಲಾದವರು ಇದ್ದರು.