ಕಲಬುರಗಿ: ರಾಜ್ಯ ಸರ್ಕಾರ ಒನ್ ಡಿಸ್ಟ್ರಿಕ್ಟ್ ಒನ್ ಪ್ರೊಡಕ್ಟ್ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಪ್ರಸಿದ್ಧ “ಶಹಾಬಾದ ಫರ್ಸಿ” ಆಯ್ಕೆಯಾಗಿದ್ದು, ಶಹಾಬಾದಿನ ಕಲ್ಲುಗಳಿಗೆ ಬ್ರ್ಯಾಂಡ್ ನೀಡಿ ಉತ್ತಮ ಮಾರುಕಟ್ಟೆ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಮಂಗಳವಾರ ಈ ಕುರಿತು ತಮ್ಮ ಕಚೇರಿಯಲ್ಲಿ ಜಿಲ್ಲಾ ಕೈಗಾರಿಕೆ ಕೇಂದ್ರ, ಲೀಡ್ ಬ್ಯಾಂಕ್, ಕೆ.ಎಸ್.ಎಫ್.ಸಿ. ಸಂಸ್ಥೆಯ ಅಧಿಕಾರಿಗಳು, ಹೆಚ್.ಕೆ.ಸಿ.ಸಿ.ಐ, ಕಾಸಿಯಾ ಪ್ರತಿನಿಧಿಗಳು ಹಾಗೂ ಕಲ್ಲು ಗಣಿಗಾರಿಕೆಗಳ ಅಸೋಸಿಯೇಷನ್ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಶಹಬಾದ ಫರ್ಸಿಗಳನ್ನು ತಂತ್ರಜ್ಞಾನ ಸಹಾಯದಿಂದ ಹೊಸ ವಿನ್ಯಾಸದೊಂದಿಗೆ ದೇಶ-ವಿದೇಶದಲ್ಲಿ ವ್ಯಾಪಕ ಮಾರುಕಟ್ಟೆ ಕಲ್ಪಿಸಿ ರಫ್ತು ಹೆಚ್ಚಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ಕಲ್ಲು ಗಣಿಗಾರಿಕೆ ಮಾಲೀಕರಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ-ಸಹಕಾರ ನೀಡಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಥಳೀಯವಾಗಿ ಲಭ್ಯವಾಗುವ ಕಲ್ಲುಗಳನ್ನು ಗುಣಮಟ್ಟದಿಂದ ಪೂರೈಕೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲು ಗಣಿಗಾರಿಕೆ ಮಾಲೀಕರು, ಗಣಿಗಾರಿಕೆ ಲೈಸೆನ್ಸ್ ಪಡೆಯುವ ಪ್ರಕ್ರಿಯೇ ಸರಳೀಕರಣ ಮಾಡಬೇಕು ಮತ್ತು ವಿದ್ಯುತ್ ದರ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಮ್ಮ ಸಮಸ್ಯೆಗಳ ಪಟ್ಟಿ ನೀಡಿದಲ್ಲಿ ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುವೆ ಎಂದರು.
ಸಭೆಯಲ್ಲಿ ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನಂದ ಬಾಳೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಷಕುಮಾರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ವಿ. ರಾತ್ರಿಕರ್, ಕೆ.ಎಸ್.ಎಫ್.ಸಿ. ಶಾಖಾ ವ್ಯವಸ್ಥಾಪಕ ಹುಕುಂಚಂದ್ ಪವಾರ್, ಕೆ.ಕೆ.ಸಿ.ಸಿ.ಐ ಅಧ್ಯಕ್ಷ ಶಶಿಕಾಂತ ಪಾಟೀಲ, ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಕಾಸಿಯಾ ಪ್ರತಿನಿಧಿ ಭೀಮಾಶಂಕರ ಪಾಟೀಲ ಸೇರಿದಂತೆ ಜಿಲ್ಲೆಯ ಕಲ್ಲು, ಕ್ವಾರಿ ಗಣಿಗಾರಿಕೆ ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.