ಶಹಾಬಾದ :ತಾಲೂಕಿನಲ್ಲಿ ಸೋಮವಾರ ನಾಗರ ಪಂಚಮಿ ನಿಮಿತ್ತ ಸಂಭ್ರಮ-ಸಡಗರದಿಂದ ನಾಗರ ಕಟ್ಟೆಗೆ ಹಾಗೂ ಹುತ್ತಿಗೆ ಮಹಿಳೆಯರು ಹಾಲೆರೆಯುವ ಮೂಲಕ ನಾಗರ ಪಂಚಮಿ ಆಚರಿಸಲಾಯಿತು.
ಬಹುತೇಕರು ಸಮೀಪದ ನಾಗರ ಕಲ್ಲಿನ ಮೂರ್ತಿಗೆÉ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಕಲ್ಲಿನ ನಾಗರ ಮೂರ್ತಿಗೆ ಹಾಲೆರೆದರು.ಕೆಲವು ಜನರು ನಾಗರ ಹುತ್ತಿಗೆ ಹಾಲೆರೆದು ಹಬ್ಬ ಆಚರಿಸಿದರು.
ಬೆಳಿಗ್ಗೆ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆ ಮುಂದೆ ನಾಗರ ಹಾವುಗಳ ಸುಂದರವಾದ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಿಗ್ಗೆಯೇ ಶ್ರಾವಣಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು.
ನಾಗರ ಹುತ್ತಿಗೆ ಹೂಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಅಪ್ಪನ ಪಾಲು, ಅವ್ವನ ಪಾಲು, ಅಣ್ಣನ ಪಾಲು ಹೀಗೇ ಮನೆಯ ಎಲ್ಲರ ಪಾಲಿನ ಹಾಲನ್ನು ಹಾಕಿ ನೈವೇದ್ಯ ಸಲ್ಲಿಸಿದರು.
ಶೇಂಗಾ, ಪುಟಾಣಿ, ಕೊಬ್ಬರಿ ಉಂಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರು. ಮನೆಗಳಲ್ಲಿ ಉರಿದ ಅರಳು, ಎಳ್ಳು, ಶೇಂಗಾ ಉಂಡೆ, ಹೆಸರುಕಾಳು ಹೀಗೆ ನಾನಾ ಬಗೆಯ ಸಿಹಿ ಹಾಗೂ ಖಾರದ ತಿನಿಸುಗಳನ್ನು ಮಾಡಿ ನಾಗಪ್ಪನಿಗೆ ಅರ್ಪಿಸಲಾಯಿತು.
ಬಳಿಕ ಕುಟುಂಬ ಬಾಂಧವರು ತಿಂಡಿಗಳನ್ನು ಪರಸ್ಪರ ಹಂಚಿಕೊಂಡರು. ಗ್ರಾಮೀಣ ಪ್ರದೇಶಗಳಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಸಂಭ್ರಮಿಸುವುದು ಕಂಡುಬಂತು. ಪುರುಷರು ಮನರಂಜನೆಗಾಗಿ ನಿಂಬೆಹಣ್ಣಿನ ಆಟ, ಕಣ್ಣುಕಟ್ಟಿಕೊಂಡು ವಸ್ತುಗಳ ಹುಡುಕಾಟ ಸೇರಿ ಮೊದಲಾದ ಗ್ರಾಮೀಣ ಸೊಗಡಿನ ಆಟಗಳನ್ನು ಆಡಿ ಖುಷಿಪಟ್ಟರು.ತರೇಹವಾರಿ ಪಲ್ಯ ತಯಾರಿಸಿ ಕುಟುಂಬದವರು ಒಟ್ಟಿಗೆ ಕುಳಿತು ಭೋಜನ ಸವಿದರು.