ಸುರಪುರ: ತಾಲ್ಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ನೀಲಕಂಠರಾಯನಗಡ್ಡಿಗೆ ಹೋಗಲು ನಿರ್ಮಿಸಲಾದ ಸೇತುವೆ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು,ಗುತ್ತಿಗೆದಾರ ಮತ್ತು ಇಂಜಿನಿಯರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಸದಸ್ಯರು ಯಾದಗಿರಿ ಭ್ರಷ್ಟಾಚಾರ ನಿಗ್ರಹ ದಳದ ಎಸ್.ಪಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕಾಧ್ಯಕ್ಷ ರವಿ ನಾಯಕ ಬೈರಿಮರಡಿ ಮಾತನಾಡಿ,ಕೃಷ್ಣಾ ನದಿಯಲ್ಲಿ ನೀಲಕಂಠರಾಯನಗಡ್ಡಿಗೆ ಹೋಗಲು ಜನತೆಗೆ ತೊಂದರೆಯಾಗುವುದನ್ನು ತಪ್ಪಿಸಲು ಹಿಂದಿನ ಸರಕಾರ ಸೇತುವೆ ನಿರ್ಮಿಸಿದೆ.ಆದರೆ ಸೇತುವೆ ಕಾಮಗಾರಿ ನಿರ್ಮಿಸಿದ ಗುತ್ತಿಗೆದಾರರು ಕಳಪೆ ಗುಣಮಟ್ಟದ ಮಣ್ಣು ಮಿಶ್ರಿತ ಮರಳು ಮತ್ತಿತರೆ ವಸ್ತುಗಳನ್ನು ಬಳಸಿ ಕಾಮಗಾರಿ ನಿರ್ಮಾಣ ಮಾಡಿದ್ದರಿಂದ ಜನರಲ್ಲಿ ಈಗಲೆ ಅಪಾಯದ ಭೀತಿ ಎದುರಾಗಿದೆ.ಆದ್ದರಿಂದ ಭ್ರಷ್ಟಾಚಾರ ನಿಗ್ರಹ ದಳವು ಕೂಡಲೆ ತನಿಖೆ ನಡೆಸಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಮತ್ತು ಸಂಬಂಧಿಸಿದ ಇಂಜಿನಿಯರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ,ಯಾದಗಿರಿ ಎಸಿಬಿ ಅಧಿಕಾರಿಗಳಾದ ಎಸ್.ಕೆ.ಕಲ್ಲೆದೇವರು,ಅಮರನಾಥ,ಗುತ್ತಪ್ಪಗೌಡ ಹಾಗು ಪ್ರಕಾಶರವರ ತಂಡಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ನಗರ ಘಟಕದ ಅಧ್ಯಕ್ಷ ಮಲ್ಲು ನಾಯಕ ಕಬಡಗೇರಾ,ಶರಣಪ್ಪ ಬೈರಿಮರಡಿ,ಯಲ್ಲಪ್ಪ ನಾಯಕ ಕಲ್ಲೋಡಿ,ರಾಘವೇಂದ್ರ ಗೋಗಿಕೇರಾ,ಸುರೇಶ ದೇವರಗೋನಾಲ ಇತರರಿದ್ದರು.