ಕಲಬುರಗಿ: ಮೌಲ್ಯಗಳು ವ್ಯಕ್ತಿಗೆ ಶ್ರೇಷ್ಟ ಜ್ಞಾನ, ಬುದ್ದಿ, ಉತ್ತಮ ನಡವಳಿಕೆ, ಸಂಸ್ಕಾರ, ಬದುಕುವ ರೀತಿ-ನೀತಿ, ಕೌಶಲಗಳಂತಹ ಗುಣಗಳನ್ನು ನೀಡುತ್ತದೆ. ಅಲಂಕಾರಿಕ ವಸ್ತುಗಳು ಹೇಗೆ ಬಾಹ್ಯ ಸೌಂದರ್ಯವನ್ನು ವೃದ್ಧಿಸುತ್ತವೆಯೋ, ಹಾಗೆಯೇ, ವ್ಯಕ್ತಿಯ ಆಂತರಿಕ ಸೌಂದರ್ಯದ ಮೆರಗನ್ನು ತಂದುಕೊಡುತ್ತವೆ. ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆಯಾಗುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲು ಮೌಲ್ಯಗಳು ತುಂಬಾ ಅಗತ್ಯವಾಗಿವೆ ಎಂದು ಜೇವರ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ‘ಅಜೀಮ್ ಪ್ರೇಮಜಿ ಪ್ರೌಂಡೇಶನ್’ ತರಬೇತಿ ಕೇಂದ್ರದಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಲಾಗಿದ್ದ ‘ನೈತಿಕ ಮೌಲ್ಯಗಳು ಮತ್ತು ಸಂವಿಧಾನ’ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂವಿಧಾನ ಇಡೀ ವಿಶ್ವದಲ್ಲಿಯೇ ದೊಡ್ಡ, ಅದ್ಬುತವಾಗಿದೆ. ಶ್ರೇಷ್ಠ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿ ಹೇಳಿದೆ. ಇದು ಭಾರತದ ಹೆಮ್ಮೆಯ ಮತ್ತು ಗೌರವದ ಪ್ರತೀಕವಾಗಿದೆ. ಪೀಠಿಕೆ ಸಂವಿಧಾನದ ಕನ್ನಡಿಯಿದ್ದಂತೆ. ಪ್ರತಿಯೊಂದು ಧರ್ಮಕ್ಕೆ ಧರ್ಮಗ್ರಂಥವಿರುವಂತೆ, ನಮ್ಮ ದೇಶಕ್ಕೆ ಸಂವಿಧಾನವೇ ರಾಷ್ಟ್ರ ಗ್ರಂಥ. ಪ್ರತಿಯೊಬ್ಬರು ಸಂವಿಧಾನದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪೌಂಡೇಶನ್‍ದ ಸಂಪನ್ಮೂಲ ವ್ಯಕ್ತಿಗಳಾದ ನಿರ್ಮಲಾ, ಶಿಲ್ಪಾ ಅವರು ಬೋಧಿಸಿದರು. ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರಾದ ಸಾಹೇಬಗೌಡ್ ಪಾಟೀಲ, ನಾಗಮ್ಮ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.