ಸುರಪುರ: ನಗರದ ಆರಾಧ್ಯ ದೈವ ಎನಿಸಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹಾಲು ಓಕುಳಿ ಜಾತ್ರೆಯ ಅಂಗವಾಗಿ ಅದ್ಧೂರಿ ಕುಸ್ತಿ ಪಂದ್ಯಾವಳಿಯನ್ನು ನಡೆಸಲಾಯಿತು.ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಮೊದಲಿಗೆ ಚಿಕ್ಕ ಬಾಲಕರಿಂದ ಆರಂಭಗೊಂಡ ಕುಸ್ತಿ ಪಂದ್ಯಾವಳಿಯಲ್ಲಿ ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು.ಮೊದಲಿಗೆ ಬಾಳೆ ಹಣ್ಣು,ನಂತರ ಐವತ್ತು,ನೂರು ರೂಪಾಯಿ,ಐದು ನೂರು,ಸಾವಿರ ರೂಪಾಯಿ ವರೆಗೆ ಬಹುಮಾನದ ಕುಸ್ತಿಗಳನ್ನು ನಡೆಸಲಾಯಿತು.ಸಂಜೆಯಾಗುತ್ತಿದ್ದಂತೆ ಹೊರ ರಾಜ್ಯದಿಂದಲೂ ಆಗಮಿಸಿದ್ದ ಕುಸ್ತಿ ಪಟುಗಳ ಸೆಣಸಾಟ ನೋಡುಗರಲ್ಲಿ ಸಂತಸ ಮೂಡಿಸಿತು.
ಸಂಜೆಯ ವೇಳೆಗೆ ಬೆಳ್ಳಿ ಕಡಗಕ್ಕಾಗಿ ನಡೆದ ಕುಸ್ತಿಯಲ್ಲಿ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಆಕಾಶ್ ಮತ್ತು ಶಿರವಾಳ ಗ್ರಾಮದ ಮಂಜುನಾಥ ಮಧ್ಯೆ ಏರ್ಪಟ್ಟು,ಸುಮಾರು ಹೊತ್ತಿನ ವರೆಗೆ ನಡೆದ ಇಬ್ಬರ ಸೆಣಸಾಟ ನೋಡುಗರಿಗೆ ಮನರಂಜನೆ ನೀಡಿತು.ಕೊನೆಯದಾಗಿ ದೋರನಹಳ್ಳಿ ಗ್ರಾಮದ ಆಕಾಶ್ ಬೆಳ್ಳಿ ಕಡಗ ಗೆದ್ದುಕೊಂಡರು.
ಈ ಸಂದರ್ಭದಲ್ಲಿ ರಾಜಾ ಲಕ್ಷ್ಮೀನಾರಾಯಣ ನಾಯಕ,ರಾಜಾ ವಾಸುದೇವ ನಾಯಕ ಸೇರಿದಂತೆ ಅನೇಕ ಜನ ವತನದಾರರು ಉಪಸ್ಥಿತರಿದ್ದು ಕೊನೆಯ ಕುಸ್ತಿಯಲ್ಲಿ ಗೆದ್ದ ಪಟುವಿಗೆ ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು.ಕುಸ್ತಿ ಪಂದ್ಯಗಳನ್ನು ನೋಡಲು ಜಿಲ್ಲೆಯಾದ್ಯಂತೆ ವಿವಿಧ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು.