ಕಲಬುರಗಿ: ಮನುಷ್ಯನ ಮನಸ್ಸು ಶುದ್ಧಿಕರಣಗೊಳ್ಳಲು ಸಮಾಜಕ್ಕೆ ಆದರ್ಶವಾಗಿ ಬದುಕಿದ ಶರಣ, ಸಂತರ, ಮಹಾಂತರ ಜೀವನವೇ ನಮಗೆ ದಾರಿದೀಪವಾಗಬೇಕು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.
ನಿನ್ನೆ ಉಪಳಾಂವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಏಳನೇಯ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಹಾರಕೂಡ ಚನ್ನಬಸವ ಶಿವಯೋಗಿಗಳ ಮಹಾಪುರಾಣ ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿ ಮಾತನಾಡುತ್ತಾ ಮಾನವೀಯ ಮೌಲ್ಯಗಳಿಂದ ಸುಂದರ ಸಮಾಜ ನಿರ್ಮಿಸುವುದು ಆದ್ಯ ಕರ್ತವ್ಯವಾಗಿದೆ. ಇಂದಿನ ಮಕ್ಕಳಿಗೆ ಅಧ್ಯಾತ್ಮದ ವಿಷಯ, ಪುರಾಣ, ಪ್ರವಚನವೆಂದರೆ ಬೇಸರದ ವಿಷಯವಾಗಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಯುವಕರು ತಮ್ಮ ಜೀವನ ಹಾಳೂ ಮಾಡಿಕೊಳ್ಳುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು. ಪುರಾಣ, ಪ್ರವಚನ ಕಾರ್ಯಕ್ರಮಗಳು ಗ್ರಾಮೀಣ ಜನರನ್ನು ಒಂದುಗೂಡಿಸುವುದರೊಂದಿಗೆ ಸಮಾಜದಲ್ಲಿ ಉತ್ತಮ ಸಂಸ್ಕಾರದ ಬೀಜ ಬಿತ್ತುವ ಕಾರ್ಯ ಮಾಡುತ್ತದೆ. ಜಾತಿ, ಮತ, ಪಂಥ ಮೀರಿ ಒಳ್ಳೆಯ ಸಮಾಜ ನಿರ್ಮಿಸುವ ಶಕ್ತಿ ಅಧ್ಯಾತ್ಮಿಕತೆಯ ಕಾರ್ಯಕ್ರಮದಲ್ಲಿ ಇದೆ ಎಂದು ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಾರಕೂಡ ಶ್ರೀಮಠದ ಪೂಜ್ಯರಾದ ಶ್ರೀ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯರು ವಹಿಸಿದ್ದರು.
೧೧ ದಿನಗಳ ಮಹಾಪುರಾಣವನ್ನು ವೇದಮೂರ್ತಿ ಮಲ್ಲಿಕಾರ್ಜುನ ಟೆಂಗಳಿಯವರು ತಮ್ಮ ಅಮೃತವಾಣಿಯಿಂದ ಹೇಳುತ್ತಿದ್ದು ಅವರಿಗೆ ಸಂಗೀತ ಕಲಾವಿದರಾದ ಶಿವಶರಣಯ್ಯ ಸ್ವಾಮಿ ಬೀದಿಮನಿ, ತಬಲಾ ಸಾಥ್ ಮಹಾಂತೇಶ ಹರವಾಳ ನೀಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಉಪಳಾಂವ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.