- ಕೊಟ್ರೇಶ್ .ವೈ
ಹಗರಿಬೊಮ್ಮನಹಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಪರಶಿವನ ಪುತ್ರ ಜೋಕುಮಾರಸ್ವಾಮಿ ಹಬ್ಬವನ್ನ ಆಚರಿಸುತ್ತಾರೆ. ‘ಮಳೆ ತರಿಸುವ ದೇವರೆಂದೇ ನಂಬಿಕೆ’ ಹೊಂದಿರುವ ಜೋಕುಮಾರಸ್ವಾಮಿ ಹಬ್ಬ ಹುಟ್ಟಿದ 7 ದಿನ ಅಳಲು, 7 ದಿನ ಸತ್ತ ಅಳಲು ಎಂದು ‘ ಇಂದಿನಿಂದ ಪ್ರಾರಂಭವಾಗಲಿದೆ.
ಉತ್ತರ ಕರ್ನಾಟಕದ ಜನತೆಗೆ ಗೌರಿ ಗಣೇಶನ ಜತೆಗೆ ಜೋಕುಮಾರಸ್ವಾಮಿಯ ಹಬ್ಬವು ವೈಶಿಷ್ಟ್ಯತೆ ಇದೆ, ಹಾಗಾಗಿ ಈ ಭಾಗದಲ್ಲಿ ಹಬ್ಬಗಳ ಸರಣಿಗೆ ಇರುತ್ತದೆ. ಗಣೇಶನ ಹಬ್ಬದಲ್ಲಿ ಮಳೆ ಇಲ್ಲದೇ ಮುಗಿಲು ನೋಡುತ್ತಿರುವ ರೈತರು ಜೋಕುಮಾರಸ್ವಾಮಿ ಹಬ್ಬ ಬಂತೆಂದರೆ ಜೋಕಪ್ಪ (ಜೋಕುಮಾರಸ್ವಾಮಿ) ಮಳೆ ತರಿಸುತ್ತಾನೆ ಎಂಬ ಬಲವಾದ ನಂಬಿಕೆ ಈಗಲೂ ಉತ್ತರ ಕನಾಟಕದ ರೈತರಲ್ಲಿ ಬಲವಾಗಿ ಬೇರೂರಿದೆ.
ಹೀಗಾಗಿ ಜೋಕಪ್ಪ ಎಂದರೆ ರೈತರಿಗೆ ಎಲ್ಲಿಲ್ಲದ ಪ್ರೀತಿ, ಮಳೆರಾಯನನ್ನು ತರಿಸುವ ದೇವರು ಎಂಬ ನಂಬಿಕೆ, ಭಾದ್ರಪದ ಶುದ್ಧ ಅಷ್ಟಮಿಯಂದು ಜೋಕಪ್ಪನ ಜನನ. ಅಂದಿನಿಂದ ಒಂದು ವಾರ ಜೋಕಪ್ಪನ ಹಬ್ಬ ನಡೆಯುತ್ತದೆ.
ಹುಟ್ಟಿ ವಾರದ ನಂತರ ಜೋಕಪ್ಪ ಸಾಯುತ್ತಾನೆ. ಅಂದು ಕಡುಬು, ಸಿಹಿ ಅಡುಗೆ ಮಾಡಿ ಹಳ್ಳಿಗಾಡಿನ ಎಲ್ಲ ಜನತೆ ಹಬ್ಬ ಆಚರಿಸುತ್ತಾರೆ.
ಅನಂತರ ಹುಣ್ಣಿಮೆಯನ್ನು ಗ್ರಾಮೀಣ ಭಾಗದಲ್ಲಿ ಈಗಲೂ ಜೋಕಪ್ಪನ ಹುಣ್ಣಿಮೆಯೆಂದೇ ಕರೆಯುತ್ತಿದ್ದು, ಏಳು ದಿನಗಳಲ್ಲಿ ಜೋಕಪ್ಪ ಸತ್ತನೆಂದೇ ಎಲ್ಲರ ನಂಬಿಕೆ.
ಜೋಕುಮಾರಸ್ವಾಮಿ ಗಂಗಾಮತಸ್ಥ ಮನೆಯಲ್ಲಿ ಹುಟ್ಟುವ ಕಂದನಾಗಿದ್ದರಿಂದ ಇಂದಿಗೂ ಆ ಸಮುದಾಯದ ಮಹಿಳೆಯರೇ ಜೋಕಪ್ಪನ ಮೂರ್ತಿಯನ್ನು ಬುಟ್ಟಿಯಲ್ಲಿ ಇಟ್ಟು ತಲೆಯ ಮೇಲೆ ಹೊತ್ತುಕೊಂಡು ಊರೂರು, ಮನೆ, ಮನೆಗೆ ಸಂಚರಿಸಿ ಪದಗಳನ್ನು ಹಾಡುತ್ತಾರೆ. ರೈತರ ಮನೆ ಬಾಗಿಲಿಗೆ ಹೋದಾಗ ಭಕ್ತರು ಕೊಟ್ಟ ಕಾಳು, ಬೆಣ್ಣೆ, ಮೆಣಸಿನಕಾಯಿ, ಉಪ್ಪು ಮುಂತಾದ ವಸ್ತುಗಳನ್ನು ಜೋಕಪ್ಪನಿಗೆ ಅರ್ಪಿಸುತ್ತಾರೆ.
ಜೋಕುಮಾರ ಸ್ವಾಮಿಯ ಪ್ರಸಾದವನ್ನು (ಚರಗ) ತೆಗೆದುಕೊಂಡು ಹೋಗಿ ಸೂರ್ಯ ಉದಯಿಸುವ ಮುಂಚೆಯೇ ಜಮೀನಿನಲ್ಲಿ ಚೆಲ್ಲುತ್ತಾರೆ. ಚರಗ ಚೆಲ್ಲಿದರೆ ಜಮೀನುಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ಇದೆ.