ಗಂಗಾವತಿ: ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ಮಕ್ಕಳಲ್ಲಿ ಸಾಹಿತ್ಯಭಿರುಚಿ ಬೆಳೆಸಲು ಮಕ್ಕಳ ಕಥಾವಾಚನ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾದದ್ದು ಎಂದು ವಡ್ಡರ ಹಟ್ಟಿ ಉಳ್ಳಿಡಗ್ಗಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಪ್ಪ ಜಂಬಲಗಿ ಹೇಳಿದರು.
ಜೀವನ್ ಪಬ್ಲಿಕೇಷನ್ಸ್ ವತಿಯಿಂದ ಆಯೋಜಿಸಲಾಗಿದ್ದ ಅರಳು ಕುಸುಮ ಕಥಾ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕೇಳುವ ಹವ್ಯಾಸ ಮೂಡಿಸುವ ಮೂಲಕ ಮಕ್ಕಳನ್ನ ಮೊಬೈಲ್ ಗೀಳಿನಿಂದ ಹೊರ ತರಲು ಹೆಚ್ಚೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಡಾ. ಮುಮ್ತಾಜ್ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನ ಪಬ್ಲಿಕೇಷನ್ಸ್ ಕೇವಲ ಪುಸ್ತಕ ಮುದ್ರಣಕ್ಕೆ ಮಾತ್ರ ಸೀಮಿತವಾಗದೇ ಸಾಂಸ್ಕೃತಿಕವಾಗಿ ಮಕ್ಕಳನ್ನು ಒಳಗೊಂಡಂತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವನ್ನು ಒಳಗೊಂಡಿದೆ ಎಂದರು. ಕಥೆ ಕೇಳುವ ಮತ್ತು ಹೇಳುವ ಪ್ರಕ್ರಿಯೆಯಿಂದ ನೆನಪಿನ ಶಕ್ತಿ, ಶಬ್ದ ಸಂಪತ್ತು, ಕಲ್ಪನಾ ಶಕ್ತಿ ವೃದ್ಧಿಸುತ್ತದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಪ್ರಕೃತಿ, ಶ್ರೇಯಾ, ಸನ್ವಿತ್, ಜೀವನ್ ಬಿರಾದಾರ್, ಸಾನ್ವಿ, ಸಮರ್ಥ, ತಬಸ್ಸುಮ್, ಜಾಹ್ನವಿ, ಪ್ರೀತಂ, ಇಬ್ರಾಹಿಂ, ಕಾರ್ತಿಕ್ ಸೇರಿ ಹಲವು ಪುಟಾಣಿ ಮಕ್ಕಳು ಕಥಾ ವಾಚನ ಮಾಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಂಗಾಪುರದ ಜೈನ ಪಬ್ಲಿಕ್ ಶಾಲೆಯ ಶಿಕ್ಷಕಿ ಕವಿತಾ ಮಾತನಾಡಿ ಮಕ್ಕಳನ್ನು ಶಾಲೆಯಿಂದ ಆಚೆ ಇಂಥ ಕಾರ್ಯಕ್ರಮಗಳಲ್ಲಿ ಮಕ್ಕಳು ಕಥೆ ಹೇಳುವುದರ ಮೂಲಕ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಉಂಟಾಗುತ್ತದೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಪರಸಪ್ಪ ಕುರುಗೋಡ ಮಾತಾನಾಡಿ, ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಸಬೇಕಾಗಿದೆ. ಮೊಬೈಲ್ ತಲೆ ತಗ್ಗಿಸುವಂತೆ ಮಾಡಿದರೆ, ಪುಸ್ತಕ ತಲೆ ಎತ್ತುವಂತೆ ಮಾಡುತ್ತದೆ. ಪಾಲಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಸುಮ್ಮನಾಗಿಸದೆ, ಅವರೊಂದಿಗೆ ಕತೆ ಹೇಳುವ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ ಓದುವುದು, ಬರೆಯುವುದು, ಮಾತನಾಡುವುದು ಕಲಿಯಬೇಕೆಂದು ಎಲ್ಲಾ ಪೋಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತೋರ್ವ ಅತಿಥಿ ಶ್ರೀಮತಿ ಮಮತಾ ಶರಣ್ಪ ಅವರು ಮಾತನಾಡಿ, ಮಕ್ಕಳಿಗೆ ಮೊಬೈಲ್ ಗೀಳು ಬಿಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿ ಬೇಕಾಗಿವೆ. ಈ ಮೂಲಕ ಮಕ್ಕಳಲ್ಲಿ ಸಾಹಿತ್ಯಭಿರುಚಿ ಬೆಳಸಬಹುದು, ಇದೊಂದು ಒಳ್ಳೆಯ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಪಾರ್ವತಮ್ಮ, ಕಾವ್ಯ ಉಮೇಶ, ಜೀವಿಕಾ, ಪ್ರಮೀಳಾ ಮಾತನಾಡಿದರು. ಪ್ರೀತಿ ಕಿರಣ, ವೆಂಕುಬಾಯಿ, ಕವಿತಾ ಮಲ್ಲನಗೌಡರ್ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯರಾದ ಚಂದ್ರಶೇಖರ್, ವೆಂಕುಬಾಯಿ ದಂಪತಿಗಳಿಗೆ ಸನ್ಮಾನಿಸಲಾಯಿತು.ಪರಸಪ್ಪ ಕುರುಗೋಡ ಪ್ರಾರ್ಥಿಸಿದರು, ರಿಜ್ವಾನಾ ಕಾರ್ಯಕ್ರಮ ನಿರೂಪಿಸಿದರು.