ಕಲಬುರಗಿ: ಕಲಾವಿದರಲ್ಲಿ ಸೃಜನಾತ್ಮಕ ಪ್ರಜ್ಞೆ ಇದ್ದರೂ ದೂರದೃಷ್ಟಿಯ ಶಕ್ತಿಯೂ ಇರುತ್ತದೆ ಎಂದು ಡಾ.ಮಹಮ್ಮದ್ ಅಬಿದ್ ಅಲಿ ಫಾರೂಕಿ ಹೇಳಿದರು.
ಕಲಬುರಗಿ ನಗರದ ಹಿದಾಯತ್ ಸೆಂಟರ್ನಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಇಸ್ಲಾಮಿಕ್ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈದ್ ಮಿಲಾದ್ ಹಬ್ಬದ ಮುನ್ನಾದಿನ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಕಲಾವಿದರು ಆಗಮಿಸಿ ಮಾನವೀಯತೆಯ ಸಂದೇಶ ಸಾರುವ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಆರ್.ಕೆ. ಹುಡುಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಲಾವಿದರು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಐಡೆಂಟಿಟಿ ಇರುತ್ತದೆ. ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಬಸವರಾಜ ಜಾನೆ ಮಾತನಾಡಿದರು. ಪ್ರದರ್ಶನದ ಸಂಚಾಲಕ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಕಾರ್ಯಕ್ರಮದ ಪರಿಕಲ್ಪನೆಯನ್ನು ವಿವರಿಸಿದರು.
ವಿದ್ವಾಂಸ ಮೊಹಮ್ಮದ್ ಜಿಯಾವುಲ್ಲಾ ಸೀರತ್ ಮತ್ತು ಮಾನವೀಯತೆಯನ್ನು ಕಲಿಸುವ ಇಸ್ಲಾಂನ ಮೂಲಭೂತ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿವಿಧ ಜಿಲ್ಲೆಗಳಿಂದ ಸುಮಾರು 29 ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕಲಾವಿದ ರೆಹಮಾನ್ ಪಟೇಲ್, ಹಾಜಿ ಮಲಾಂಗ್, ರಾಜಶೇಖರ್ ಎಸ್, ಬಸವರಾಜ ಉಪ್ಪಿನ್, ಸುಬ್ಬಯ್ಯ ನೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರದರ್ಶನವು ಸಾರ್ವಜನಿಕರಿಗೆ ಸೆಪ್ಟೆಂಬರ್ 29 ರವರೆಗೆ ತೆರೆದಿರುತ್ತದೆ.